ಜನಸಾಮಾನ್ಯರಿಗೂ ಸಂವಿಧಾನದ ಮಹತ್ವ ತಿಳಿಸುವ ಕಾರ್ಯ ಆಗಬೇಕು.

ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಸಂಸದ

ಕನ್ನಡಪ್ರಭ ವಾರ್ತೆ ಶಿರಸಿ

ಜನಸಾಮಾನ್ಯರಿಗೂ ಸಂವಿಧಾನದ ಮಹತ್ವ ತಿಳಿಸುವ ಕಾರ್ಯ ಆಗಬೇಕು ಎಂದು‌ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬುಧವಾರ ನಗರದ ಎಂಇಎಸ್ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನು ಓದದ ಸಾಕಷ್ಟು ಜನ ಇದ್ದಾರೆ. ಅಂತಹ ಸಾಮಾನ್ಯರಿಗೂ ನಮ್ಮ ಸಂವಿಧಾನದ ಮಾಹಿತಿ ತಿಳಿಸುವ ಕಾರ್ಯ ಆಗಬೇಕು. ಇಲ್ಲಿನ ತನಕ ಸಂವಿಧಾನವು ಇದು ದೇಶ ರಕ್ಷಿಸಿದ ವಿಧಾನ ಯುವ ಜನತೆಗೆ ತಲುಪಿಸಬೇಕು. ಅಂಬೇಡ್ಕರ್ ಅವರ ಇತಿಹಾಸ ಗೊತ್ತಿದ್ದರೆ ಸಂವಿಧಾನದ‌ ಮಹತ್ವ ಅರ್ಥವಾಗುತ್ತದೆ. ಅಂಬೇಡ್ಕರ್ ಅವರು ಕರಡು ಸಿದ್ಧ ಮಾಡಿ ಕೊಟ್ಟಿದ್ದು, ಅವರ ಕೊಡುಗೆ ಸದಾ ಸ್ಮರಣೀಯ. ದೂರದೃಷ್ಟಿಯ ಸಂವಿಧಾನದ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳಬೇಕು. ನಮ್ಮ‌ ಸಂವಿಧಾನಕ್ಕೆ ಜೀವಂತಿಕೆ, ಸಾಮಾಜಿಕ ನ್ಯಾಯ ಕೊಡಿಸಲು ಅಂಬೇಡ್ಕರ್ ಅವರ ಜೀವನ ಅನುಭವವೇ ಕಾರಣ ಎಂದರು.

ಸಂವಿಧಾನ ಕೆಲವರ ಸ್ವತ್ತಲ್ಲ. ಇದು 140 ಕೋಟಿ‌ ಜನರ ಸ್ವತ್ತು. ಸಂವಿಧಾನದಿಂದ ದೇಶ ಮೊದಲು ಎಂಬ ಭಾವನೆ ಬೆಳಸಿಕೊಳ್ಳಬೇಕು ಎಂದ ಅವರು, ಸರದಾರ ವಲ್ಲಭಭಾಯಿ ಪಟೇಲ್ ಜನ್ಮ ವರ್ಷಾಚರಣೆ, ವಂದೇ‌ಮಾತರಂ ವರ್ಷಾಚರಣೆ ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಂಇಎಸ್ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಹೆಗಡೆ‌ ಮುಳಖಂಡ ಹಾಗೂ ಉಪ‌ಸಮಿತಿ ಅಧ್ಯಕ್ಷ ನರೇಂದ್ರ ಹೊಂಡಗಾಸಿಗೆ, ಸದಸ್ಯರಾದ ಹಾಲಪ್ಪ ಜಕಲಣ್ಣನವರ, ಸತೀಶ ಹೆಗಡೆ, ಪ್ರಾಚಾರ್ಯ ಅಶೋಕ ಭಟಕಳ ಸೇರಿದಂತೆಮತ್ತಿತರರು ಇದ್ದರು.

ಕರ್ತವ್ಯ ಪಾಲಿಸಿ:

ನಮ್ಮ ಹಕ್ಕಿನ ಜೊತೆ ಕರ್ತವ್ಯ ಪಾಲಿಸಬೇಕು. ಇಲ್ಲವಾದರೆ ಸಂವಿಧಾನಕ್ಕೆ ಬಲ, ಜೀವಂತಿಕೆ ಬರುವುದಿಲ್ಲ. ಕಾನೂನು ವಿದ್ಯಾರ್ಥಿಗಳಿಗಾದರೂ ಬಾಯಿಪಾಠ ಮಾಡಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.