ಸಾರಾಂಶ
ಲಕ್ಷ್ಮೇಶ್ವರ: ರೈತರು ಅನೇಕ ಕಷ್ಟನಷ್ಟ ನಡುವೆಯೂ ಇಡಿ ಜಗತ್ತಿಗೆ ಅನ್ನ ನೀಡುವ ಕಾಯಕ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಅಂತಹ ಅನ್ನದಾತರನ್ನು ಗೌರವಿಸುವ ಕಾರ್ಯ ನಾವೇಲ್ಲರೂ ಮಾಡಬೇಕು, ಕೃಷಿ ಅಧಿಕಾರಿ, ಕೃಷಿಕ ಸಮಾಜ ಸೇರಿದಂತೆ ರೈತರ ಕೊಂಡಿಯಾಗಿ ಕೆಲಸ ಮಾಡಬೇಕು ಎಂದು ಕೃಷಿಕ ಸಮಾಜದ ನೂತನ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ ಮತ್ತು ನೂತನ ತಾಲೂಕಾಧ್ಯಕ್ಷ ಮಹೇಶ ಹೊಗೆಸೊಪ್ಪಿನ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ರೈತ ಸಂಪರ್ಕ ಕೇಂದ್ರದಿಂದ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಸಬ್ಸಿಡಿ ದರದಲ್ಲಿ ದೊರೆತ ತಾಡಪಾಲು, ಸ್ಪಿಂಕ್ಲರ್ ಸೆಟ್ ರೈತರಿಗೆ ವಿತರಿಸಿ ಮಾತನಾಡಿದರು.ಇಲಾಖೆಯವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸರಿಯಾಗಿ ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕು. ಯಾವುದೇ ರೈತರು ಸಹ ಯೋಜನೆಗಳಿಂದ ವಂಚಿತರಾಗಬಾರದು, ಅಲ್ಲದೆ ತಾಲೂಕು ಮತ್ತು ಜಿಲ್ಲಾ ರೈತ ಕೇಂದ್ರಗಳಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡುವ ಕಾರ್ಯವಾಗಬೇಕು. ಅಲ್ಲದೆ ಸಬ್ಸಿಡಿ ದರದಲ್ಲಿ ದೊರಕುವ ವಿವಿಧ ಸಲಕರಣೆಗಳ ಬಗ್ಗೆ ಕೆಲವು ರೈತರಿಗೆ ಮಾಹಿತಿ ದೊರೆಯದೆ ಅದರಿಂದ ವಂಚಿತರಾಗುತ್ತಾರೆ, ಹೀಗಾಗದಂತೆ ಕ್ರಮ ತೆಗೆದುಕೊಳ್ಳಬೇಕು. ನೂತನವಾಗಿ ಕೃಷಿಕ ಸಮಾಜದಿಂದ ಆಯ್ಕೆಯಾಗಿರುವ ಪದಾಧಿಕಾರಿಗಳು ತಾಲೂಕು ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ, ಕೃಷಿ ಭವನ ನಿರ್ಮಾಣ, ರೈತರಿಗೆ ಹೊಸ ತಂತ್ರಜ್ಞಾನ ಬಗ್ಗೆ ತಿಳಿಸುವುದು, ರೈತರಿಗೆ ವಿಶೇಷ ತರಬೇತಿ ಗ್ರಾಮೀಣ ಭಾಗಗಳಲ್ಲಿ ರೈತರಿಗೆ ಅನುಕೂಲ ಆಗುವುದಕ್ಕೆ ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡುವುದು ಹಾಗೂ ಜಿಲ್ಲಾ ಮಟ್ಟದ ಕೃಷಿಕ ಸಮಾಜ ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಸುವುದು ಇತ್ಯಾದಿ ಯೋಜನೆ ರೂಪಿಸಿಕೊಂಡಿದ್ದು ಅವುಗಳನ್ನು ಕಾರ್ಯಗತಗೊಳಿಸುವದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.
ಕೃಷಿ ಇಲಾಖೆ ನಿರ್ದೇಶಕ ರೇವಣಪ್ಪ ಮನಗೂಳಿ, ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ ಅವರು ಇಲಾಖೆ ಪರವಾಗಿ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಈ ವೇಳೆ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳಾದ ಪಕ್ಕೀರಗೌಡ ಅಜ್ಜನಗೌಡ್ರ, ಎಂ.ಎಸ್. ದೊಡ್ಡಗೌಡ್ರ, ಬಸವರಾಜೆಂದ್ರಪ್ಪ ಇಟಗಿ, ರಾಜೀವ ಕುಂಬಿ, ನಿಂಗಪ್ಪ ಬನ್ನಿ, ಶಿವಯೋಗಿ ಮಾನ್ವಿ, ವಿರೂಪಾಕ್ಷಪ್ಪ ಪಡಗೇರಿ, ಅಶೋಕ ನೀರಾಲೋಟಿ, ರಮೇಶ ಉಪನಾಳ, ಶಿದ್ದು ರಗಟಿ, ಶೇಖಣ್ಣ ಕರಿನಾಗಣ್ಣವರ, ಶಿವಾನಂದ ಲಿಂಗಶೆಟ್ಟಿ, ಮುದಕಣ್ಣ ಗದ್ದಿ ಹಾಗೂ ಕೃಷಿ ಕೇಂದ್ರದ ಸಿಬ್ಬಂದಿ, ರೈತರು ಇದ್ದರು.