ಸಾರಾಂಶ
ಭದ್ರಾವತಿ: ಕಾರ್ಮಿಕರೆಲ್ಲರೂ ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಾಗ ಸಂಘಟನೆಗೆ ಹೆಚ್ಚು ಬಲ ಬರುವ ಜೊತೆಗೆ ಕಾರ್ಮಿಕರ ಬೇಡಿಕೆಗಳು ತಕ್ಷಣ ಈಡೇರಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಮುಖಂಡರು ಗಮನ ಹರಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಹೇಳಿದರು.
ಭದ್ರಾವತಿ: ಕಾರ್ಮಿಕರೆಲ್ಲರೂ ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಾಗ ಸಂಘಟನೆಗೆ ಹೆಚ್ಚು ಬಲ ಬರುವ ಜೊತೆಗೆ ಕಾರ್ಮಿಕರ ಬೇಡಿಕೆಗಳು ತಕ್ಷಣ ಈಡೇರಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಮುಖಂಡರು ಗಮನ ಹರಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಹೇಳಿದರು.
ಗುರುವಾರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ಇಲಾಖೆ ಕಲ್ಯಾಣ ಮಂಡಳಿಯ ಕ್ಯಾಲೆಂಡರ್ ವಿತರಣೆ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರದ ಕಾರ್ಮಿಕರಲ್ಲಿ ಬಲಿಷ್ಠ ಸಂಘಟನೆ ಕೊರತೆ ಕಂಡು ಬರುತ್ತಿದ್ದು, ಇದು ವಿಪರ್ಯಾಸದ ಸಂಗತಿಯಾಗಿದೆ. ಯಾವುದೇ ಸಂಘಟನೆ ಬಲಶಾಲಿಯಾಗಿರಬೇಕು. ಆ ಮೂಲಕ ನಮ್ಮ ಹಕ್ಕು, ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು. ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಕಾರ್ಮಿಕರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಕಾರ್ಮಿಕ ಇಲಾಖೆ ಅರ್ಹ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕು ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಎಸ್.ಕುಮಾರ್ ಮಾತನಾಡಿ, ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳುವಳಿಕೆ ಹೊಂದಬೇಕು. ಅಸಂಘಟಿತ ಕಾರ್ಮಿಕರ ಪರವಾಗಿ ಕ್ಷೇತ್ರದ ಶಾಸಕರು ಜೊತೆಗಿದ್ದು, ತಮ್ಮ ಹಕ್ಕು, ಬೇಡಿಕೆಗಳನ್ನು ಈಡೇರಿಸಿಕೊಡಲು ಬದ್ಧರಾಗಿದ್ದಾರೆ ಎಂದರು. ಒಕ್ಕೂಟದ ಅಧ್ಯಕ್ಷ ತ್ಯಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.ನಿರ್ಮಲ ಆಸ್ಪತ್ರೆ ಸುಪೇರಿಯರ್ ಸಿಸ್ಟರ್ ವಿಲ್ಮಾ, ಆಶಾಕಾರ್ಯಕರ್ತೆ ರಾಜೇಶ್ವರಿ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಟೈಲರ್ ಸಂಘದ ಅಧ್ಯಕ್ಷ ಸುಂದರ್, ಪೂರ್ಣಿಮಾ, ಕಾರ್ಮಿಕ ನಿರೀಕ್ಷಕರಾದ ಬಿ.ಎಂ.ರಕ್ಷಿತ್ ಮತ್ತು ಸುಪ್ರೀತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಯುವ ಮುಖಂಡ ವಿಜಯ್ ನಿರೂಪಿಸಿದರು. ಒಕ್ಕೂಟದ ತಾಲೂಕು ಕಾರ್ಯಾಧ್ಯಕ್ಷ ಎನ್.ಕುಮಾರ್, ಜಿಲ್ಲಾ ಉಪಾಧ್ಯಕ್ಷ ಸಂಜಯ್, ತಾಲೂಕು ಕಾರ್ಯದರ್ಶಿಗಳಾದ ಮಧುಸೂದನ್ ಮತ್ತು ಮಧು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಅಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.