ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಶಿವಲಿಂಗಾನಂದ ಶ್ರೀ ಸಲಹೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯುವಜನಾಂಗ ರಂಗ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಸನ್ಮಾರ್ಗದೆಡೆಗೆ ಸಾಗಬೇಕೆಂದು ಸದ್ಗುರು ಕಬೀರಾನಂದ್ರಾಶಮದ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.ನಗರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅಂತ್ಯೋದಯ ಕಲ್ಚರಲ್ ಫೌಂಡೇಶನ್ ಚಿತ್ರದುರ್ಗ ಹಾಗೂ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ರಂಗಕಲೆಯು ಜನಮಾನಸದಲ್ಲಿ ಉಳಿಯುವ ಪರಿಣಾಮಕಾರಿಯಾದ ಮಾಧ್ಯಮ ವಯೋಮಾನದ ಹಂಗು ಇಲ್ಲದೆ ಕಿರಿಯರಿಂದ ಹಿಡಿದು ಎಲ್ಲಾ ವಯೋಮಾನದವರು ಈ ಕಲೆಯಲ್ಲಿ ತೊಡಗಿದ್ದಾರೆ ಆದರೆ ಆ ಕಲಾವಿದರ ಬದುಕಿಗೆ ಬೇಕಾಗುವ ಅವಕಾಶಗಳು ಸರ್ಕಾರದ ಮೂಲಕ ದೊರೆಯವ ಹಾಗೆ ನೋಡಿಕೊಳ್ಳ ಬೇಕೆಂದು ತಿಳಿಸಿದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಕೆ.ಎಂ. ವೀರೇಶ್ ಮಾತನಾಡಿ ಜಗತ್ತಿನ ಶ್ರೇಷ್ಠ ನಟರು ಶಿಕ್ಷಕರಾಗಿದ್ದಾರೆ ತಮ್ಮ ದೈನಂದಿನ ಕಾಯಕದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಗುರುತರ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಮಾತನಾಡಿ ಕಲಾವಿದರ ಬದುಕು ನೀರಿನ ಮೇಲಿನ ಗುಳ್ಳೆ ಇದ್ದಂತೆ ಬಹುತೇಕ ಕಲಾವಿದರು ಸಂಕಷ್ಟದಲ್ಲಿದ್ದಾರೆ ಇಂತಹ ಕಲಾವಿದರನ್ನು ಸಮಾಜ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವಾದಾಗ ಮಾತ್ರ ಸಮಾಜದಲ್ಲಿ ಕಲಾವಿದರು ಬದುಕಲು ಸಾಧ್ಯ ಎಂದರು.ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಾದ ಮಲ್ಲಪ್ಪನಹಳ್ಳಿ ಮಹಲಿಂಗಪ್ಪ, ಬಿ.ಜಿ.ಕೆರೆ ಅತಾವುಲ್ಲಾ, ಚಿತ್ರದುರ್ಗ ಪುಷ್ಪಲತಾ, ರಂಗ ಪರಿಸರದ ನಂದಗೋಪಾಲ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘಟಕ ಡಿ.ಒ. ಮುರಾರ್ಜಿ, ಪ್ರಾಂಶುಪಾಲರಾದ ಡಾ.ಗಿರೀಶ್ ಟಿ.ನಿರಂಜನಮೂರ್ತಿ ಸಿ.ಎಲ್.ಕಲಾವಿದರಾದ ಚನ್ನಬಸಪ್ಪ, ಶಿವಲಿಂಗಮ್ಮ, ಜಯಣ್ಣ ಉಪಸ್ಥಿತರಿದ್ದರು.