ಯುವ ಪೀಳಿಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲಿ

| Published : Oct 06 2024, 01:20 AM IST

ಸಾರಾಂಶ

ತಿಪಟೂರು: ಯುವ ಪೀಳಿಗೆ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಕವನ, ಕಾವ್ಯ, ಕವಿತೆಗಳನ್ನು ಬರೆಯುವುದನ್ನು ರೂಢಿಸಿಕೊಂಡು ಉತ್ತಮ ಕವಿಗಳಾಗಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಟಿ.ಎಸ್.ನಾಗರಾಜಶೆಟ್ಟರು ಹೇಳಿದರು.

ತಿಪಟೂರು: ಯುವ ಪೀಳಿಗೆ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಕವನ, ಕಾವ್ಯ, ಕವಿತೆಗಳನ್ನು ಬರೆಯುವುದನ್ನು ರೂಢಿಸಿಕೊಂಡು ಉತ್ತಮ ಕವಿಗಳಾಗಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಟಿ.ಎಸ್.ನಾಗರಾಜಶೆಟ್ಟರು ಹೇಳಿದರು.

ನಗರದ ನಿವೃತ್ತ ನೌಕರರ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಕಾವ್ಯ ಬರವಣಿಗೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಆಸಕ್ತಿ ಅಧ್ಯಯನ, ಪ್ರತಿಭೆ, ಸ್ಫೂರ್ತಿಗಳ ಸಂಗಮವೇ ಕಾವ್ಯವಾಗಿದ್ದು, ಇದಕ್ಕೆ ಸತತ ಅಧ್ಯಯನವಿರಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿಯೇ ಹೆಚ್ಚು ಪುಸ್ತಕ, ಕಾದಂಬರಿಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ತಾವು ಸಹ ಯುವ ಕವಿಗಳಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು.

ಶಸಾಪ ತಾ.ಅಧ್ಯಕ್ಷ ಪಿ.ಆರ್.ಗುರುಸ್ವಾಮಿ ಮಾತನಾಡಿ, ಉದಯೋನ್ಮುಖ ಕವಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಅನುಭವಿಸಿ ಬರೆದ ಕವನ ಅರ್ಥಪೂರ್ಣವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೊಲೀಸ್ ಉಪಾಧೀಕ್ಷಕ ವೀರಭದ್ರಪ್ಪ ಮಾತನಾಡಿ, ಕವಿಗಳು, ಲೇಖಕರು ಭಾವನಾ ಪ್ರಪಂಚದಿಂದ ಹೊರಬಂದು ಬದುಕಿನ ವಾಸ್ತವಿಕತೆಯನ್ನು ತೆರೆದಿಸುವ ಬರವಣಿಗೆ ಮಾಡಬೇಕಿದೆ ಎಂದ ಅವರು, ಇಂದಿನ ಕವಿಗೋಷ್ಠಿಯಲ್ಲಿ ನಾಲ್ಕಾರು ಯುವ ಕವಿಗಳು ಅಂತಹ ಪ್ರಯತ್ನ ಮಾಡಿದ್ದಾರೆ. ನನ್ನ ವೃತ್ತಿಗೂ ಕಾವ್ಯಕ್ಕೂ ದೂರವಾದರೂ ಸಾಹಿತ್ಯ ಅಧ್ಯಯನದಿಂದ ನೆಮ್ಮದಿ, ಶಾಂತಿ, ಆಲೋಚನಾ ಪ್ರವೃತ್ತಿ ಹೆಚ್ಚಾಗಲಿದೆ ಎಂದು ಹೇಳಿದರು.

ತಾಲೂಕಿನ ವಿವಿಧ ಭಾಗಗಳಿಂದ ಇಪ್ಪತ್ತನಾಲ್ಕು ಕವಿಗಳು ಭಾಗವಹಿಸಿ ಸ್ವರಚಿತ ಕವನ ವಾಚಿಸಿದರು. ಜಿಲ್ಲಾ ಕಸಾಪ ಆಯೋಜಿಸಿರುವ ದಸರಾ ಕವಿಗೋಷ್ಠಿಗೆ ತಾಲೂಕಿನಿಂದ ರಮ್ಯಶ್ರೀ ಮತ್ತು ಆರ್.ಕೆ.ಶಿವಶಂಕರಪ್ಪರವರನ್ನು ಆಯ್ಕೆ ಮಾಡಲಾಯಿತು.

ನಿವೃತ್ತ ಪ್ರಾಂಶುಪಾಲ ನಂ.ಶಿವಗಂಗಪ್ಪ, ಡಿ.ಎಸ್.ಮರುಳಪ್ಪ, ನಿವೃತ್ತ ಇಂಜಿನಿಯರ್ ಮಂಜುನಾಥ್, ಕದಳಿ ವೇದಿಕೆಯ ಸ್ವರ್ಣಗೌರಿ, ನಿವೃತ್ತ ಶಿಕ್ಷಕ ಸೋಮಶೇಖರ್, ಕಾರ್ಯದರ್ಶಿ ಮಂಜಪ್ಪ, ರುಕ್ಮಿಣಿ ಇದ್ದರು.

ದಸರಾ ಮತ್ತು ಯುಗಾದಿ ಕವಿಗೋಷ್ಠಿಗಳನ್ನು ಆಯೋಜಿಸುವ ಮೂಲಕ ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ತಿಪಟೂರಿನಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಎಂ.ಬಸವರಾಜಪ್ಪ, ಕಸಾಪ ತಾ.ಅಧ್ಯಕ್ಷ.