ಸಾರಾಂಶ
ಶಾಸಕ ಶಿವರಾಮ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.
ಯಲ್ಲಾಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.ಶಾಸಕ ಶಿವರಾಮ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, "ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು. ಸ್ವಾತಂತ್ರ್ಯವು ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ, ಇದು ವೈಯಕ್ತಿಕ ಮತ್ತು ಸಾಮಾಜಿಕ ಸಮಾನತೆಯ ಸಂಕೇತವಾಗಿದೆ. ಯುವ ಪೀಳಿಗೆಯು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು " ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ.ಆರ್.ಡಿ. ಜನಾರ್ಧನ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ದೇಶಭಕ್ತಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. "ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಹೊರಹೊಮ್ಮಬೇಕು. ದೇಶದ ಪ್ರಗತಿಗೆ ಎಲ್ಲರೂ ಕೈಜೋಡಿಸೋಣ " ಎಂದು ಹೇಳಿದರು.
ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳು, ನೃತ್ಯ ಮತ್ತು ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು ಮತ್ತು ದೇಶಪ್ರೇಮದ ಭಾವನೆಯನ್ನು ಉದ್ದೀಪಿಸಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಘೋಷಣೆಗಳೊಂದಿಗೆ ಇಡೀ ಆವರಣವು ಉತ್ಸಾಹದಿಂದ ಕೂಡಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿಗಳನ್ನು ವಿತರಿಸಲಾಯಿತು.
ವೈಷ್ಣವಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಡಾ.ಓಂ ಪ್ರಕಾಶ್ ನಾಯಕ್ ಸ್ವಾಗತಿಸಿದರು. ರವಿ ಶೇಷಗಿರಿ ನಿರೂಪಿಸಿದರು, ರುಬೀನಾಖಾತು ವಂದಿಸಿದರು.ಫೋಟೋ: ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಧ್ವಜಾರೋಹಣ ನಡೆಸಿದರು.