ಸಾರಾಂಶ
- ವಕೀಲರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ, ಸಿದ್ದವೀರಪ್ಪ ಭಾವಚಿತ್ರ ಅನಾವರಣ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತದ ಇತಿಹಾಸವನ್ನು ಇಂದಿನ ಯುವಪೀಳಿಗೆ ಅಧ್ಯಯನ ಮಾಡಬೇಕು. ಆ ಮೂಲಕ ನೆಮ್ಮದಿ ನೀಡದ ಕೃತಕ ಜೀವನದಿಂದ ಹೊರಬರಬೇಕು. ಜೀವನದ ಬಗ್ಗೆ ಪುನರಾಲೋಚಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ.ವೇಲಾ ಹೇಳಿದರು.ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ, ಎಚ್.ಸಿದ್ದವೀರಪ್ಪ ಭಾವಚಿತ್ರ ಅನಾವರಣ, ಪ್ರತಿಭಾ ಪುರಸ್ಕಾರ, ವಕೀಲರ ನೂತನ ಡೈರಕ್ಟರಿ ಬಿಡುಗಡೆ ಮಾಡಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನವನ್ನು ರಚಿಸುವ ಸಂದರ್ಭ ಸಭೆಯಲ್ಲಿದ್ದ ಗಣ್ಯರು, ಸದಸ್ಯರು ಪ್ರತಿಪದವನ್ನು ಅತ್ಯಂತ ಜಾಗರೂಕತೆ, ವಿವೇಚನೆಯಿಂದ ಬಳಸಿ, ಸಂವಿಧಾನ ರಚಿಸಿದ್ದಾರೆ. ಜೀವಿಸುವ ಹಕ್ಕು, ಶುದ್ಧಗಾಳಿ, ಒಳ್ಳೆಯ ಕುಡಿಯುವ ನೀರು, ನಿರ್ಮಲ ವಾತಾವರಣ ಸಹ ಒಳಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟಿನ ಅರ್ಥ ವಿವರಣೆ ನೀಡಿದೆ. ಆ ಮೂಲಕ ಈ ಹಕ್ಕಿನ ವ್ಯಾಪ್ತಿಯನ್ನು ವಿವರಿಸಿದರು.ಮಕ್ಕಳಸ್ನೇಹಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಮಾತನಾಡಿ, ಆರಂಭದಿಂದಲೂ ದೇಶದ ಬಗ್ಗೆ ಚಿಂತನೆ ಮಾಡಿದವರು ವಕೀಲರೇ. ಆದ್ದರಿಂದ ವಕೀಲರು ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಸ್ವಾರ್ಥಿಗಳಿಂದ ಇಂದು ರಾಷ್ಟ್ರದ ಪ್ರಗತಿಗೆ ಅಡ್ಡಿ ಆಗುತ್ತಿದೆ. ರಾಷ್ಟ್ರದ ರಾಜಕೀಯ ಪ್ರಧಾನ ಭೂಮಿಕೆಯಲ್ಲಿ ವಕೀಲರು ಮತ್ತೆ ಮುಂದೆ ಬರಬೇಕಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಒಟ್ಟು 99 ವಕೀಲರಿದ್ದರು. ಅವರಲ್ಲಿ ನಮ್ಮ ವಕೀಲರ ಸಂಘದ ಸದಸ್ಯರಾಗಿದ್ದ ಎಚ್.ಸಿದ್ದವೀರಪ್ಪ ಸಹ ಒಬ್ಬರು ಎನ್ನುವುದು ಹೆಗ್ಗಳಿಕೆಯ ಸಂಗತಿ. ಸಿದ್ದವೀರಪ್ಪನವರು ಸರ್ವಜನರ ಪ್ರೀತಿಗೆ ಪಾತ್ರರಾಗಿದ್ದರು. ಕರ್ನಾಟಕ ಸರ್ಕಾರದಲ್ಲಿ ಗೃಹಖಾತೆ ಸೇರಿದಂತೆ ಹಲವಾರು ಮಹತ್ತರ ಖಾತೆಗಳನ್ನು ನಿರ್ವಹಿಸಿ, ಕಾನೂನು ಸಚಿವರಾದ ಸಂದರ್ಭ ಹಲವು ಮಹತ್ವದ ಮಸೂದೆಗಳನ್ನು ಮಂಡಿಸಿ ಶಾಸನಗಳನ್ನಾಗಿ ಮಾಡಿರುವುದು ಇತಿಹಾಸದ ಅವಲೋಕನ ಎಂದು ಸ್ಮರಿಸಿದರು.ವಕೀಲರಾದ ಕೆ.ಎಂ. ಮಲ್ಲಿಕಾರ್ಜುನ್, ಕೆ.ಎಚ್. ಮಂಜಪ್ಪ, ಎನ್.ಎಂ. ಆಂಜನೇಯ, ಬಿ.ಎಂ. ಹನುಮಂತಪ್ಪ, ವಿನಯ್‌ಕುಮಾರ್, ರಜ್ವಿಖಾನ್ ಮಾತನಾಡಿದರು. ವಕೀಲರಾದ ಕೆ.ಎಂ.ಜಯಪ್ರಕಾಶ್ ಅವರು, ಎಚ್.ಸಿದ್ದವೀರಪ್ಪನವರು ಸಂವಿಧಾನ ಸಭೆಯಲ್ಲಿ ಜಮೀನ್ದಾರಿ ಪದ್ದತಿ ರದ್ದತಿ ಬಗ್ಗೆ ತಿದ್ದುಪಡಿ ಮಂಡಿಸಿ ಮಾಡಿದ ಭಾಷಣ ವಾಚಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಕೀಲರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗರೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಆದ ಹೆಚ್.ಕೆ.ರೇಷ್ಮಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳು, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ಉಪಸ್ಥಿತರಿದ್ದರು.- - -
-22ಕೆಡಿವಿಜಿ42:ದಾವಣಗೆರೆಯಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ವಕೀಲರ ನೂತನ ಡೈರಕ್ಟರಿ ಬಿಡುಗಡೆ ಮಾಡಲಾಯಿತು.