ಯುವಕರು ದೂರದೃಷ್ಟಿ ಅಳವಡಿಸಿಕೊಳ್ಳಲಿ: ರವಿ ಮೆಣಸಿನಕಾಯಿ

| Published : Mar 02 2025, 01:17 AM IST

ಸಾರಾಂಶ

ಹಾವೇರಿ ನಗರದ ಹೆಗ್ಗೇರಿ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ದಿಮೆದಾರರಿಗೆ ಹಾಗೂ ತರಬೇತುದಾರರಿಗೆ ಉದ್ಯಮ ತರಬೇತಿ ಹಾಗೂ ಅರಿವು ಕಾರ್ಯಕ್ರಮ (ಪಿಎಂ ಇಂಟರ್ನ್‌ಶಿಪ್‌ ಮತ್ತು ಅಪ್ರೆಂಟೈಸ್‌ಶಿಪ್‌) ನಡೆಯಿತು.

ಹಾವೇರಿ: ಕೇಂದ್ರ ಸರ್ಕಾರ ಇತ್ತೀಚೆಗೆ ಅಪ್ರೆಂಟೈಸ್‌ಶಿಪ್‌ ಪೋರ್ಟಲ್ ಆರಂಭಿಸಿದ್ದು, ಡಿಪ್ಲೊಮಾ ಮತ್ತು ಐಟಿಐ ಮುಗಿಸಿದವರು ಅಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಲ್ಲಿ ಅವರಿಗೆ ನೇರವಾಗಿ, ಉತ್ತಮವಾದ ಉದ್ಯೋಗ ಲಭಿಸಲಿವೆ ಎಂದು ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ರವಿ ಮೆಣಸಿನಕಾಯಿ ಹೇಳಿದರು.

ನಗರದ ಹೆಗ್ಗೇರಿ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ, ಉದ್ದಿಮೆದಾರರಿಗೆ ಹಾಗೂ ತರಬೇತುದಾರರಿಗೆ ಹಮ್ಮಿಕೊಂಡಿದ್ದ (ಪಿಎಂ ಇಂಟರ್ನ್‌ಶಿಪ್‌ ಮತ್ತು ಅಪ್ರೆಂಟೈಸ್‌ಶಿಪ್‌) ಉದ್ಯಮ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಅಪ್ರೆಂಟೈಸ್‌ಶಿಪ್ ಪೋರ್ಟಲ್ ವೆಬ್‌ಸೈಟ್ ಮೂಲಕ ದೇಶದಲ್ಲಿ ಎಲ್ಲೆಲ್ಲಿ ತಾಂತ್ರಿಕ ಹುದ್ದೆಗಳು ಖಾಲಿ ಇವೆಯೋ ಆ ಬಗ್ಗೆ ನಿಮ್ಮ ಮೊಬೈಲ್‌ಗೆ ಮಾಹಿತಿ ಬರಲಿದೆ. ಈ ಮೂಲಕ ನೀವು ನಿಮ್ಮ ಆಸಕ್ತಿಯ, ಇಷ್ಟವಾದ ಕೆಲಸ ಪಡೆಯಬಹುದಾಗಿದೆ. ಅಲ್ಲದೇ ಸ್ವಸಹಾಯ ಸಂಘದ ಅಡಿಯಲ್ಲಿ ಹಾಗೂ ಡಿಐಸಿ ಮೂಲಕ ಐಟಿಐ ಪೂರೈಸಿದವರಿಗೆ ಸರ್ಕಾರ ಉಚಿತ ತರಬೇತಿ ನೀಡುತ್ತಿದೆ. ಇಲ್ಲಿ ತರಬೇತಿ ಪಡೆದು ಮುದ್ರಾ ಯೋಜನೆಯಡಿ, ಎಂಎಸ್‌ಎಂಇ ಅಂದರೆ ಸಣ್ಣ ಉದ್ಯಮಗಳಿಗೆ ಅಗತ್ಯ ಸಾಲ ಪಡೆದು ಹೊಸ ಕೈಗಾರಿಕೆ ಸ್ಥಾಪಿಸುವ ಮೂಲಕ ಉದ್ಯಮಿಗಳಾಗಬಹುದು. ಅಲ್ಲದೇ ನಿರುದ್ಯೋಗಿಗಳಿಗೆ ನೀವೇ ಉದ್ಯೋಗ ನೀಡುವ ಮೂಲಕ ಉದ್ಯೋಗದಾತರಾಗಲೂ ಅವಕಾಶವಿದೆ. ಈ ನಿಟ್ಟಿನಲ್ಲಿ ಇಂದಿನ ಯುವಕರು ಅಗತ್ಯವಾದ ದೂರದೃಷ್ಟಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಾಯವ್ಯ ಸಾರಿಗೆ ಇಲಾಖೆಯ ಡಿಎಂಇ ಕೆ.ಆರ್. ನಾಯಕ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಿಲ್ಲಾ ಅಧಿಕಾರಿ ರೋಹಿಣಿ ಮಾತನಾಡಿ, ಇಂದು ತಾಂತ್ರಿಕ ತರಬೇತಿ ಪಡೆದವರಿಗೆ ಸಾರಿಗೆ ಇಲಾಖೆ ಸೇರಿದಂತೆ ಹಲವೆಡೆ ಉದ್ಯೋಗಾವಕಾಶಗಳಿವೆ. ಈ ಕುರಿತು ಐಟಿಐ ಪೂರೈಸಿದವರು ತಮ್ಮ ಮಾತ್ರವಲ್ಲ, ವಿವಿಧ ಶೈಕ್ಷಣಿಕ ಅರ್ಹತೆ ಪಡೆದವರೂ ತಮ್ಮ ಆಸಕ್ತಿಯ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯ ಸದಾಶಿವ ಹಳ್ಯಾಳ ಮಾತನಾಡಿ, ನಿರುದ್ಯೋಗ ಸಮಸ್ಯೆ ಕುರಿತು ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಆದರೆ ಯುವ ಸಮುದಾಯ ಕೇವಲ ಮಾಸಿಕ ವೇತನಕ್ಕಷ್ಟೇ ಆದ್ಯತೆ ನೀಡದೇ ತಮ್ಮಲ್ಲಿ ಇರುವ ಜಾಣ್ಮೆ, ಕೌಶಲಗಳಿಗೆ ಪೂರಕವಾದ ವೃತ್ತಿ ಅಥವಾ ಪ್ರವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಇಂಥ ಸಾವಿರಾರು ಯಶಸ್ವಿ ಸಾಧಕರನ್ನು ನಾವು ಕಾಣಬಹುದಾಗಿದೆ. ಉದ್ಯೋಗಿ ಆಗುವುದಕ್ಕಿಂತ ಉದ್ಯಮಿಯಾಗು ಎಂಬುದು ಇಂದಿನ ಘೋಷಣೆಯಾಗಿದ್ದು, ಈ ಮೂಲಕ ಮತ್ತಷ್ಟು ಜನರಿಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ ತಿಳಿಸಿದರು.

ರಾಮಚಂದ್ರ ಬಿರಾದಾರ, ರಾಘವೇಂದ್ರ ಕುದರಿ, ಗುರುರಾಜ ಮೋಟೆಬೆನ್ನೂರು, ಶ್ರೀಶೈಲ ಮಿರ್ಜಿ ಇದ್ದರು.