ದೇಶ ಅತಿಹೆಚ್ಚು ಯುವಸಮುದಾಯ ಹೊಂದಿದ್ದು, ಯುವ ಜನತೆ ಉತ್ತಮ ಶಿಕ್ಷಣ ಪಡೆದಾಗ ಮಾತ್ರವೇ ಭಾರತ ವಿಶ್ವದ ಗಮನವನ್ನು ಇನ್ನೂ ಹೆಚ್ಚಾಗಿ ಸೆಳೆಯಲು ಸಾಧ್ಯ.
ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕುಮಟಾದೇಶ ಅತಿಹೆಚ್ಚು ಯುವಸಮುದಾಯ ಹೊಂದಿದ್ದು, ಯುವ ಜನತೆ ಉತ್ತಮ ಶಿಕ್ಷಣ ಪಡೆದಾಗ ಮಾತ್ರವೇ ಭಾರತ ವಿಶ್ವದ ಗಮನವನ್ನು ಇನ್ನೂ ಹೆಚ್ಚಾಗಿ ಸೆಳೆಯಲು ಸಾಧ್ಯ. ಅವರಿಗೆ ಸಮಗ್ರವಾಗಿ ಆತ್ಮವಿಶ್ವಾಸ ತುಂಬಿ, ಉತ್ತಮ ಶಿಕ್ಷಣ ನೀಡಬೇಕು ಎಂದು ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮಿಲಿಂದ್ ಕುಲಕರ್ಣಿ ಹೇಳಿದರು. ಪಟ್ಟಣದ ಹವ್ಯಕ ಸಭಾಭವನದಲ್ಲಿ ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ದೇಶದ ಪ್ರತಿಭಾವಂತ ಯುವಶಕ್ತಿ ವಾಣಿಜ್ಯ, ವಿಜ್ಞಾನ, ಕಲೆ, ಐ.ಟಿ. ಹಾಗೂ ಇತರ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ. ಹೀಗಾಗಿ, ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್ ಶಿಕ್ಷಣಕ್ಕೆ ಹೆಚ್ಚಿನ ಸಹಾಯ ಮಾಡುತ್ತಿದೆ. ಜನರು ಹೊಸ ಕೌಶಲ್ಯಗಳನ್ನು ಹಾಗೂ ಹೊಸ ವಿದ್ಯೆ ಕಲಿಯುವುದರ ಮೂಲಕ ಜೀವನವನ್ನು ಯಶಸ್ವಿಯಾಗಿಸಿಕೊಳ್ಳಲು ಸಾಧ್ಯ. ಕಲಿತ ವಿದ್ಯೆ ಮರೆಯದಂತೆ ಸ್ಮರಣೆಯಲ್ಲಿಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.ದೆಹಲಿಯ ಖ್ಯಾತ ವಿಜ್ಞಾನಿ ಹಾಗೂ ರೆನೆಸೆನ್ಸ್ ಸೋಲಾರ್ ನ ಮುಖ್ಯ ತಾಂತ್ರಿಕ ಅಧಿಕಾರಿ ಡಾ. ಸತ್ಯೇಂದ್ರ ಕುಮಾರ್ ಮಾತನಾಡಿ, ಶಿಕ್ಷಣಕ್ಕಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುವುದು ಅತ್ಯಂತ ಉತ್ತಮವಾದ ಕಾರ್ಯ. ಕಲಿಯುವ ಹಂಬಲ ಇರುವವರಿಗೆ ನೆರವಾಗುವ ಮೂಲಕ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್ ಸಮಾಜಕ್ಕೆ ಆಸರೆಯಾಗಿದೆ. ಇಂದಿನ ಯುವ ಜನತೆ ಇಂತಹ ಕಾರ್ಯಗಳಿಂದ ಪ್ರೇರಣೆ ಪಡೆದು, ಹಿರಿಯರ ಮಾರ್ಗದರ್ಶನದಲ್ಲಿ ಮುಂದಿನ ಸಮಾಜವನ್ನು ಸೂಕ್ತ ದಾರಿಯಲ್ಲಿ ಮುನ್ನಡೆಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣದ ಉತ್ಕಟ ಆಸೆ ಹೊಂದಿದ ಆರ್ಥಿಕವಾಗಿ ಅಷ್ಟಾಗಿ ಸಬಲರಲ್ಲದ ಪಿ.ಯು., ಪದವಿ, ಡಿಪ್ಲೊಮಾ, ಐಟಿಐ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳ ಶಿಕ್ಷಣ ಪಡೆಯುತ್ತಿರುವ ೧೭೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು ₹೧೯ ಲಕ್ಷ ಆರ್ಥಿಕ ಸಹಾಯವನ್ನು ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್ ಮೂಲಕ ವಿತರಿಸಲಾಯಿತು.ಖ್ಯಾತ ವೈದ್ಯೆ ಡಾ. ಸುಶ್ಮಾ ಪಾಟೀಲ್, ರೋಟರಿ ಅಧ್ಯಕ್ಷ ಕಿರಣ ನಾಯಕ, ಲಯನ್ಸ್ ಅಧ್ಯಕ್ಷ ನಾಗರಾಜ ಭಟ್ಟ, ಟ್ರಸ್ಟ್ ನ ಸದಸ್ಯರಾದ ಸತೀಶ ಎಸ್. ನಾಯ್ಕ, ಎಚ್.ಎನ್. ನಾಯ್ಕ, ಸತೀಶ ಬಿ. ನಾಯ್ಕ, ಪ್ರಶಾಂತ ಹೆಗಡೆ ಇನ್ನಿತರರು ಇದ್ದರು. ಮಂಜುನಾಥ ಎಂ. ನಾಯ್ಕ ನಿರೂಪಿಸಿದರು. ನಂತರ ಯಕ್ಷಗಾನ ಪ್ರದರ್ಶನ ರಂಜಿಸಿತು.