ಸಾರಾಂಶ
ರಟ್ಟೀಹಳ್ಳಿ: ಇಂದಿನ ಯುವ ಸಮುದಾಯ ತಮ್ಮ ಬದುಕಿನ ಮೌಲ್ಯಗಳನ್ನು ಅರಿತು, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕಳ್ಳಿ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಲಿಂಗದೇವರಕೊಪ್ಪ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ಭಾರತ ಹಳ್ಳಿಗಳ ಪ್ರಧಾನ ದೇಶವಾಗಿದ್ದು, ಮಹಾತ್ಮಾ ಗಾಂಧೀಜಿ ಕಂಡ ಕನಸಿನಂತೆ ಪ್ರತಿ ಹಳ್ಳಿಗಳೂ ಸರ್ವತೋಮುಖ ಉದ್ಧಾರವಾದಾಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಕ್ಯಾಂಪ್‌ಗಳನ್ನು ಹಳ್ಳಿಗಳಲ್ಲಿ ಆಯೋಜಿಸುವ ಮೂಲಕ ಗ್ರಾಮದಲ್ಲಿನ ಜನರ ಜೊತೆ ವಿದ್ಯಾರ್ಥಿಗಳು ಸ್ವಚ್ಛತೆಯ ಹಾಗೂ ಸಾಮಾಜಿಕ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಿ ಸ್ವತಃ ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತೆಗೆ ಮುಂದಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಇಂದಿನ ಯುವ ಸಮುದಾಯ, ಅದರಲ್ಲೂ ವಿದ್ಯಾರ್ಥಿಗಳು ದುಷ್ಚಟಗಳಿಂದ ದೂರವಿದ್ದು, ಇಂತಹ ಕ್ಯಾಂಪ್‌ಗಳಲ್ಲಿ ಪಾಲ್ಗೊಳ್ಳುವ ಮೂಲಕ ಯಾವುದೇ ಪ್ರತಿಫಲ, ಅಪೇಕ್ಷೆ ಇಲ್ಲದೆ ಸೇವಾ ಮನೋಭಾವ ಬೆಳೆಸಿಕೊಳ್ಳಿ. ಆ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಿ ಎಂದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಸಾಮಾಜಿಕ ಸೇವಾ ಮನೋಭಾವ ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಸಹಾಯಕಾರಿಯಾಗಿದ್ದು, ಬೇಧ-ಭಾವ ಮರೆತು ಸಹ ಬಾಳ್ವೆಯಿಂದ ಇದ್ದರೆ ನಿಮ್ಮ ವಿದ್ಯಾರ್ಥಿ ಜೀವನ ಸಮಾಜಕ್ಕೆ ಮಾದರಿಯಾಗುವುದು ಎಂದರು.
ಶಿಬಿರಗಳಲ್ಲಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕ್ರಿಯಾಶೀಲರಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಸಮಾಜ ಹಾಗೂ ಸದೃಢ ದೇಶ ನಿರ್ಮಾಣಕ್ಕೆ ನಿಮ್ಮ ಅಗತ್ಯತೆ ಬಹುಮುಖ್ಯ ಎಂದರು.ಯೋಜನಾಧಿಕಾರಿ ಎಚ್. ಶಿವಾನಂದ ಮಾತನಾಡಿ, ಶಿಕ್ಷಣದೊಂದಿಗೆ ಸೇವೆ, ಶಿಕ್ಷಣದೊಂದಿಗೆ ವ್ಯಕ್ತಿ ವಿಕಸನ ಎಂಬ ಎರಡು ಧ್ಯೇಯಗಳೊಂದಿಗೆ ಗಾಂಧೀಜಿ ಜನ್ಮಶತಮಾನೋತ್ಸವ ದಿನವಾದ 24 ಸೆಪ್ಟೆಂಬರ್ 1969ರಂದು ಎನ್ ಎಸ್ ಎಸ್ ಅನುಷ್ಠಾನಗೊಂಡಿತು. ಅಂದು ₹40 ಸಾವಿರ ಸ್ವಯಂಸೇವಕರಿಂದ ಪ್ರಾರಂಭವಾಗಿ ಇಂದು 40 ಲಕ್ಷ ಸ್ವಯಂ ಸೇವಕರನ್ನು ಹೊಂದಿದ್ದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.ರಾಜ್ಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಯಲ್ಲಿ ಎನ್‌ಎಸ್‌ಎಸ್ ಅನುಷ್ಠಾನಗೊಂಡಿದ್ದು, 4 ಲಕ್ಷ ಸ್ವಯಂ ಸೇವಕರನ್ನು ಹೊಂದಿ ಸಮಾಜಮುಖಿ ನಾಗರಿಕರನ್ನಾಗಿ ನಿರ್ಮಾಣ ಮಾಡುಲು ಇಂತಹ ಶಿಬಿರಗಳು ಸಹಾಯಕಾರಿಯಾಗಿವೆ ಎಂಬುದು ನಾವೆಲ್ಲ ಹೆಮ್ಮ ಪಡುವಂತಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ತೋಗರಿಕಟ್ಟಿ, ಮಲ್ಲನಗೌಡ ಪಾಟೀಲ್, ಬಸನಗೌಡ ಆನ್ವೇರಿ, ಶಿವಕುಮಾರ ಹೊಸಳ್ಳಿ, ಪ್ರಾಚಾರ್ಯ ಪಿ. ಮುನಿಯಪ್ಪ, ಉಪನ್ಯಾಸಕ ಸಂತೋಷ ಅಂಗಡಿ, ಅಶೋಕ ಲಮಾಣಿ ಗ್ರಾಮಸ್ಥರು ಶಿಬಿರಾರ್ಥಿಗಳು ಇದ್ದರು.