ಸಾರಾಂಶ
ಶಿರಸಿ: ಕೃಷಿಯಲ್ಲಿ ಯುವ ಸಮುದಾಯ ತೊಡಗಿಕೊಳ್ಳಲು ತೋಟಗಾರಿಕಾ ಇಲಾಖೆ ಹೊಸ ಕಾರ್ಯಕ್ರಮಗಳನ್ನು ರೂಪಿಸುವತ್ತ ಚಿಂತಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಶನಿವಾರ ನಗರ ತೋಟಗಾರಿಕಾ ಇಲಾಖೆ ಆವಾರದಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಆತ್ಮಯೋಜನೆ, ಕೃಷಿ ಸಂಬಂಧಿತ ಇಲಾಖೆಗಳು, ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಹಮ್ಮಿಕೊಂಡ ಫಲಪುಷ್ಪ ಪ್ರದರ್ಶನ ಮತ್ತು ಸಾವಯವ ಸಿರಿಧಾನ್ಯ ಮೇಳ ಉದ್ಘಾಟಿಸಿ ಮಾತನಾಡಿದರು. ಆಧುನಿಕ ತಂತ್ರಜ್ಞಾನಗಳನ್ನು ತೋಟಗಾರಿಕಾ ಬೆಳೆಗಳಲ್ಲಿ ಅಳವಡಿಸಿ, ಆರ್ಥಿಕವಾಗಿ ಬಲಿಷ್ಠವಾಗಬೇಕು ಎಂದರು.ಉತ್ತರಕನ್ನಡ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹ ಸಿಗಬೇಕಿದೆ. ಜಿಲ್ಲೆಯಲ್ಲಿ ವೈವಿಧ್ಯಮಯ ತೋಟಗಾರಿಕಾ ಹಾಗೂ ಕೃಷಿ ಬೆಳೆಗಳು ಕಾಣಸಿಗುತ್ತವೆ. ನಮ್ಮ ಜಿಲ್ಲೆಯ ರೈತ ಸಮುದಾಯದ ಅಗತ್ಯೆಗಗಳನ್ನು ಸರ್ಕಾರದ ಮಟ್ಟದಲ್ಲಿ ತಿಳಿಸಲು ಹಾಗೂ ಎಚ್ಚರಿಸಲು ಸಂಘಟಿತ ಹೋರಾಟ ಆಗಬೇಕಿದೆ. ನಮ್ಮ ಜಿಲ್ಲೆಯ ರೈತರಿಗೆ ಕೃಷಿ ಯಾಂತ್ರೀಕರಣಕ್ಕೆ ಪ್ರೋತ್ಸಾಹ ಇನ್ನಷ್ಟು ಹೆಚ್ಚು ತಲುಪುವ ಅವಶ್ಯಕತೆಯಿದೆ ಎಂದರು.
ಜನಸಮುದಾಯ ಕ್ರಿಯಾಶೀಲ ಮನೋಭಾವ ಕಾಣಸಿತ್ತದೆ. ಇದಕ್ಕೆ ಪ್ರೋತ್ಸಾಹ ಸಿಗುವುದು ಅವಶ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅಲಂಕಾರ ಗಿಡಗಳು ಹೊರ ರಾಜ್ಯಗಳಿಂದ ಅತಿಹೆಚ್ಚು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ನಮ್ಮ ರೈತರು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರಯತ್ನಿಸಬೇಕು. ಸ್ಥಳೀಯವಾಗಿ ಸಿಗುವ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಆರ್ಥಿಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯು ಪ್ರಮುಖವಾಗಿ ತೋಟಗಾರಿಕಾ ಬೆಳೆಯನ್ನು ಒಳಗೊಂಡಿದೆ. ಕೃಷಿಕರ ಬದುಕು ಕಷ್ಟವಾಗಿದ್ದು, ಭತ್ತದ ಕೃಷಿಕರು ರೋಗಬಾಧೆಯಿಂದ ಕಂಗೆಟ್ಟಿದ್ದಾರೆ. ಎಲೆಚುಕ್ಕೆ, ಹಳದಿ, ಕೊಳೆ ರೋಗ ಹೆಚ್ಚಾಗುತ್ತಿರುವುದರಿಂದ ಅಡಿಕೆ ಬೆಳೆಗಾರರರೂ ಸಂಕಷ್ಟ ಎದುರಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರನ್ನು ಎಲ್ಲರೂ ಗೌರವಿಸಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಅನ್ನಕ್ಕೆ ತತ್ವಾರವಿತ್ತು. ಹಸಿರು ಕ್ರಾಂತಿ ಪರಿಚಯಿಸಿದ ಹಿನ್ನೆಲೆ ನಮ್ಮ ದೇಶಕ್ಕೆ ಆಹಾರ ಹೆಚ್ಚಾಗಿ ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಾಯಿತು. ಹೃದಯ ಶ್ರೀಮಂತಿಕೆ ರೈತರಲ್ಲಿ ಕಾಣಬಹುದು ಎಂದರು.
ಕೃಷಿ ಇಲಾಖೆಯ ಆತ್ಮ ಯೋಜನೆಯ ಜಿಲ್ಲೆಯ ವಿಶಿಷ್ಟ ಕೃಷಿಕರಾದ ಸುಬ್ರಾಯ ಭಟ್ಟ ಯಲ್ಲಾಪುರ, ಪರಮೇಶ್ವರ ಗಾಂವ್ಕರ, ಎಂ.ಡಿ.ಮ್ಯಾಥ್ಯೂ ಭಟ್ಕಳ, ಬಸವರಾಜ ನಡುವಿನಮನಿ ಮುಂಡಗೋಡ, ಅನ್ನಪೂರ್ಣ ಬೆಣ್ಣಿ ಮುಂಡಗೋ, ಸಂದೀಪ ತೋರಸ್ಕರ ದಾಂಡೇಲಿ, ಸಂತೋಷಕುಮಾರ ಗೌಡರ, ವಿವಿಧ ೬೦೦ ಭತ್ತದ ತಳಿ ಸಂರಕ್ಷಣೆ ಮಾಡಿದ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ನಾಗರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.ಸಾವಯವ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಜಲಜಾಕ್ಷಿ ಹೆಗಡೆ ಶಿರಸಿ, ಪ್ರೇಮಾ ಜೋಶಿ ಯಲ್ಲಾಪುರ, ಆಶಾ ಹೆಗಡೆ ಸಿದ್ದಾಪುರ ಇವರನ್ನು ಗೌರವಿಸಲಾಯಿತು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ನಾರಾಯಣ ಹೆಗಡೆ ಹಿಲ್ಲೂರ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ, ಜಿಲ್ಲಾ ಗ್ಯಾರೆಂಟಿ ಯೋಜನೆಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ತಹಸೀಲ್ದಾರ ಶ್ರೀಧರ ಮುಂದಲಮನಿ, ತಾಲೂಕಾ ಆತ್ಮ ಸಮಿತಿ ಅಧ್ಯಕ್ಷ ದುಷ್ಯಂತರಾಜ ಕೊಲ್ಲೂರಿ, ಡಿ.ಎಸ್.ಪಿ ಗಣೇಶ.ಕೆ.ಎಲ್, ತೋಟಗಾರಿಕಾ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವ್ಕರ, ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ ಮತ್ತಿತರರು ಉಪಸ್ಥಿತರಿದ್ದರು.ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಬಿ.ಪಿ.ಸತೀಶ ಪ್ರಾಸ್ತಾವಿಕ ಮಾತನಾಡಿದರು. ತೋಟಗಾರಿಕಾ ಹಿರಿಯ ನಿರ್ದೇಶಕ ಸತೀಶ ಹೆಗಡೆ ಸ್ವಾಗತಿಸಿದರು. ಸಂಧ್ಯಾ ಭಟ್ಟ ತಂಡದವರು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಸಹಾಯಕ ನಿರ್ದೇಶಕ ಗಣೇಶ ಹೆಗಡೆ ನಿರೂಪಿಸಿದರು.