ಸಾರಾಂಶ
ಶ್ರೀಶೈಲ ಪೀಠದ ಶ್ರೀ ೧೦೦೮ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಇಂದಿನ ದಿನ ನೋಡಿದರೆ ಯುದ್ಧದ ವಾತಾವರಣ ಕಂಡುಬರುತ್ತಿದೆ. ಈ ವೇಳೆ ಯುವಕರು ದೇಶಾಭಿಮಾನ ರೂಢಿಸಿಕೊಳ್ಳಬೇಕು ಎಂದು ಶ್ರೀಶೈಲ ಪೀಠದ ಶ್ರೀ ೧೦೦೮ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಜಗದ್ಗುರುಗಳು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಹಾಭಿಮಾನಿ ಬಿಟ್ಟು ಯುವಕರು ದೇಶಕ್ಕಾಗಿ ದುಡಿಯುವ ಮನೋಭಾವ ಯುವಕರು ಬೆಳೆಸಿಕೊಳ್ಳಬೇಕು. ಎಲ್ಲಕ್ಕಿಂತ ದೇಶ ದೊಡ್ಡದು. ಧರ್ಮಕ್ಕಿಂತಲೂ ದೇಶ ದೊಡ್ಡದಾಗಿ ಕಾಣಿಸಿಕೊಳ್ಳಲಿದೆ. ದೇಶ ಉಳಿದರೆ ಮಾತ್ರ ಧರ್ಮ ಉಳಿಯಲು ಸಾಧ್ಯ. ಸಂಸ್ಕೃತಿ ಉಳಿಯಬೇಕಾದರೆ ಭಾರತ ಉಳಿಯಬೇಕು. ದೇಶಾಭಿಮಾನ ಎಂಬುದು ಸಾಮಾನ್ಯವಲ್ಲ. ಯುವಕರು ದುಶ್ಚಟಗಳಿಗೆ ಬಲಿಯಾಗದೇ ದೇಶಾಭಿಮಾನ, ಧರ್ಮಾಭಿಮಾನ ರೂಢಿಸಿಕೊಂಡು ನಡೆಯಬೇಕು ಎಂದರು.
ಜಾಗತಿಕವಾಗಿ ಈ ದೇಶ ಬೆಳೆಯಬೇಕಾದರೆ ದೇಶಕ್ಕಾಗಿ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ವಿಚಾರ ಮಾಡಿದಾಗ ರಾಷ್ಟ್ರಮಟ್ಟದಲ್ಲಿ ನಮ್ಮ ದೇಶ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪರಾಕ್ರಮ ಮೆರೆದಿದ್ದಲ್ಲದೇ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದ ಶ್ರೀಗಳು, ಧರ್ಮದಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸದ್ಗತಿ ಪ್ರಾಪ್ತವಾಗಲಿದೆ. ಇದರಿಂದ ನಮ್ಮ ದೇಶವನ್ನು ಯಾವ ರೀತಿ ಬೆಳೆಸಬೇಕೆಂಬ ಮಾರ್ಗವೂ ದೊರೆಯಲಿದೆ. ನಮ್ಮ ಸೈನಿಕರು ಪ್ರಸಂಗ ಬಂದರೆ ಸಂಧಾನಕ್ಕೂ ಸೈ, ಯುದ್ಧಕ್ಕೂ ಸೈ ಎಂದರು.
ಈ ವೇಳೆ ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಪುಣ್ಯಕೋಟಿ ಗ್ರಹದ ಒಡೆಯರಾದ ಈರಯ್ಯ ಗದಗಯ್ಯ ಹಿರೇಮಠ, ಐ.ಜಿ.ಹಿರೇಮಠ, ಎನ್.ಎಸ್.ಮದ್ದರಕಿ, ಗುರು ಕೊಪ್ಪದ, ಯುವ ಸಿರಿ ಸೌಹಾರ್ದ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಉಪಸ್ಥಿತರಿದ್ದರು.