ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಕಲಾವಿದೆಯರ ಕೊರತೆ ಉಂಟಾಗುತ್ತಿದೆ. ಪ್ರಸ್ತುತ ನಟಿಸುತ್ತಿರುವ ಕೆಲವು ನಟಿಯರನ್ನು ಹೊರತುಪಡಿಸಿದರೆ ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ ನಾಟಕಗಳಲ್ಲಿ ಅಭಿನಯಿಸಲು ಕಲಾವಿದೆಯರೇ ಸಿಗುತ್ತಿಲ್ಲ. ಯುವಜನಾಂಗವು ರಂಗಭೂಮಿ ಪ್ರವೇಶ ಮಾಡುವ ಮೂಲಕ ರಂಗನಟಿಯರ ಕೊರತೆ ನೀಗಿಸಬೇಕು ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಹಾಗೂ ಹಿರಿಯ ರಂಗಕಲಾವಿದೆ ಡಾ. ಕೆ. ನಾಗರತ್ನಮ್ಮ ಹೇಳಿದರು.
ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗಭೂಮಿ ಮತ್ತು ಮಹಿಳೆ ಕುರಿತು ಅವರು ಮಾತನಾಡಿದರು.ಆರಂಭದ ಹಂತದಲ್ಲಿ ಮೊದಲು ನಾಟಕಗಳಲ್ಲಿ ಪುರುಷರೇ ಸ್ತ್ರೀ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ನಂತರ ಮಹಿಳೆಯರು ರಂಗಭೂಮಿ ಪ್ರವೇಶ ಮಾಡಿದರು. ಕನ್ನಡ ರಂಗಭೂಮಿಗೆ ಮೊದಲ ಮಹಿಳಾ ಕಲಾವಿದೆಯಾಗಿ ಗುಳೇದಗುಡ್ಡ ಯಲ್ಲುಬಾಯಿ ಪಾದಾರ್ಪಣೆ ಮಾಡಿದರು. ಅವರ ನಂತರ ಮರಿಯಮ್ಮನಹಳ್ಳಿ, ಕೂಡ್ಲಿಗಿ, ಬಳ್ಳಾರಿ, ಗದಗ, ಬಾದಾಮಿ ಇನ್ನೂ ಅನೇಕ ಜಿಲ್ಲೆಗಳಲ್ಲಿ ಮಹಿಳಾ ಕಲಾವಿದರು ರಂಗಭೂಮಿ ಪ್ರವೇಶಿದರು ಎಂದು ಅವರು ಹೇಳಿದರು.
ಜನರು ರಂಗಭೂಮಿಯ ನಟಿಯರು ಎಂದರೆ ನೋಡುವ ರೀತಿಯೇ ಬೇರೆ ಇರುತ್ತದೆ. ಅವಮಾನ, ಅಪಮಾನ, ಕಷ್ಟಗಳಳನ್ನೆಲ್ಲ ಸಹಿಸಿಕೊಂಡು ರಂಗಭೂಮಿಯಲ್ಲಿ ದೊಡ್ಡ ಸಾಧನೆ ಮಾಡಿದವರಲ್ಲಿ ಮನ್ಸೂರು ಸುಭದ್ರಮ್ಮ, ಬಳ್ಳಾರಿ ಲಲಿತಮ್ಮ, ಆರ್. ನಾಗರತ್ನಮ್ಮ, ಕುಕನೂರು ರೆಹಮಾನವ್ವ, ಅಂಜಲಿದೇವಿ ಇನ್ನೂ ಹಲವಾರು ಕಲಾವಿದೆಯರು ಜನರ ಮನದಲ್ಲಿ ಉತ್ತಮ ಕಲಾವಿದರಾಗಿ ಉಳಿದಿದ್ದಾರೆ ಎಂದು ಅವರು ಹೇಳಿದರು.ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹವ್ಯಾಸಿ ರಂಗಭೂಮಿ ಕಲಾವಿದರು ಜಾತ್ರೆಗಳಲ್ಲಿ ನಾಟಕಗಳ ಮೂಲಕ ಜನರಿಗೆ ಮನರಂಜನೆ ನೀಡುತಿದ್ದಾರೆ. ಜೊತೆಗೆ ಸಮಾಜಮುಖಿ ಸಂದೇಶಗಳನ್ನು ಸಾರುತ್ತಿದ್ದಾರೆ. ಹೀಗಾಗಿ ರಂಗಭೂಮಿ ಕಲೆಯು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಹಿರಿಯ ರಂಗಕರ್ಮಿ ಮ.ಬ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಂಕರ್ ಆನಂದ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೀರಭದ್ರಪ್ಪ ತಂಬ್ರಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ ಅಧ್ಯಕ್ಷರಾದ ವಿ. ಅನುರಾಧ, ಕಲಾವಿದ ಹಾಗೂ ಪತ್ರಕರ್ತ ನಾಗರಾಜ್ ಮಾಡ್ಲಾಕನಹಳ್ಳಿ,ಸ್ಥಳೀಯ ಮುಖಂಡರಾದ ಮಧುರ ಚೆನ್ನಶಾಸ್ತ್ರಿ ಹಿರೇಮಠ, ಜಾನಪದ ಗಾಯಕ ಯಲ್ಲನಗೌಡ ಶಂಕರಬಂಡೆ, ಬಯಲಾಟ ಕಲಾವಿದರ ರಾಜ್ಯಧ್ಯಕ್ಷ ವಿಶ್ವನಾಥ್ ಸಾಹುಕಾರ್, ಸಮಾಜ ಸೇವಕ ರಾಜೇಶ್,ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಇತರರಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ದೇವರಾಜ್ ಗಿಣಿಗೇರಿ ಅವರಿಗೆ ಸಂಸ್ಥೆಯ ವತಿಯಿಂದ ಶ್ರೀ ವಾಲ್ಮೀಕಿ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಲ್ಲಿಕಾರ್ಜುನ ತುರುವನೂರು ರಂಗಗೀತೆಗಳನ್ನು ಹಾಡಿದರು. ಮಹಾಂತೇಶ್ ತಬಲವಾದನ ನುಡಿಸಿದರು.