ಯುವಕರು ಅಂಬೇಡ್ಕರ್‌ ಸಿದ್ಧಾಂತದ ಹಾದಿಯಲ್ಲಿ ಸಾಗಲಿ: ಸಚಿವ ಮುನಿಯಪ್ಪ

| Published : Jun 24 2024, 01:31 AM IST

ಯುವಕರು ಅಂಬೇಡ್ಕರ್‌ ಸಿದ್ಧಾಂತದ ಹಾದಿಯಲ್ಲಿ ಸಾಗಲಿ: ಸಚಿವ ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಾದಿಗ ಸಮಾಜವನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪುನರ್‌ ಸಂಘಟನೆ ಮಾಡುವ ಅವಶ್ಯಕತೆ ಇದೆ.

ಹೊಸಪೇಟೆ: ಮಾದಿಗ ಸಮಾಜವನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪುನರ್‌ ಸಂಘಟನೆ ಮಾಡುವ ಅವಶ್ಯಕತೆ ಇದೆ. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ, ಹೋರಾಟದ ಮನೋಭಾವ ಅಳವಡಿಸಿಕೊಂಡು, ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮೂಹ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.ಜಿಲ್ಲಾ ಮಾದಿಗ ಮಹಾಸಭಾದಿಂದ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭವ್ಯ ಭಾರತ ಕಟ್ಟಲು ಮಕ್ಕಳ ಪಾತ್ರ ಮುಖ್ಯವಾಗಿದೆ. ಶಿಕ್ಷಕರು ಹಾಗೂ ಪೋಷಕರು ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕಿದೆ. ಪ್ರತಿ ಜಿಲ್ಲೆಯಲ್ಲಿ ಬಡ ಮಕ್ಕಳಿಗೆ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇದರಿಂದ ಸಮಾಜ ಅಭಿವೃದ್ಧಿ ಆಗಲಿದೆ. ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಮಕ್ಕಳಿಗೆ ಉತ್ತೇಜನ ನೀಡಲಿದೆ. ಸಮಾಜ ಅಂಬೇಡ್ಕರ್‌ ಚಿಂತನೆ ಹಾದಿಯಲ್ಲಿ ಮುನ್ನಡೆಯಬೇಕು. ಇದರಿಂದ ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದರು.

ಸಮಾಜ ಅಭಿವೃದ್ಧಿ ಹೊಂದಲು ನಾವೆಲ್ಲರೂ ಒಗ್ಗೂಡಬೇಕು. ಪಕ್ಷಗಳು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿವೆ. ಸಮುದಾಯ, ಸಮಾಜದ ಹಿತಕ್ಕಾಗಿ ನಾವೆಲ್ಲರೂ ಒಂದಾಗಿ ನ್ಯಾಯಯುತ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಪಕ್ಷಾತೀತವಾಗಿ ಒಗ್ಗಟ್ಟಾಗಿ ಸಮಾಜಕ್ಕಾಗಿ ಸಮಾನತೆ ಹೋರಾಟ ನಡೆಸಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷಗಳೇ ಕಳೆದರೂ ಮಾದಿಗ ಸಮಾಜ ಇನ್ನು ಹಿಂದುಳಿದಿದೆ ಎಂಬ ಕೂಗು ಪಾರ್ಲಿಮೆಂಟ್‌ಗೂ ಕೇಳಿಸಬೇಕು. ಈ ದಿಸೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಮೂಲ ದಲಿತ ಜನಾಂಗವಾಗಿರುವ ಮಾದಿಗ ಸಮಾಜ ಸರ್ಕಾರದ ಸೌಲಭ್ಯದಿಂದ ವಂಚಿತವಾಗುತ್ತಿದೆ. ಪ್ರತಿಯೊಬ್ಬರು ಜಾಗೃತರಾಗಿ ಸಂಘಟಿತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಆಸ್ತಿಯನ್ನಾಗಿ ರೂಪಿಸಬೇಕು. ಶೈಕ್ಷಣಿಕ ಪ್ರಗತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ಚಾಮಿ ಮಾತನಾಡಿ, ಒಳ ಮೀಸಲಾತಿಗಾಗಿ ನಾವು ಹೋರಾಟ ನಡೆಸಿದ್ದೇವೆ. ಸಮಾಜ ಯುವಕರು ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯಬೇಕು. ಅಂಬೇಡ್ಕರ್‌ ಉನ್ನತ ಶಿಕ್ಷಣ ಪಡೆದು, ದೇಶಕ್ಕೆ ಸಂವಿಧಾನದ ಕೊಡುಗೆ ನೀಡಿದ್ದಾರೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಾವು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಉನ್ನತ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದರು.

ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಅಂಬೇಡ್ಕರ್ ಎಲ್ಲರಿಗೂ ಸಮಾನ ಬದುಕಿನ ಹಕ್ಕು ನೀಡಿದರು. ಮಾದಿಗ ಸಮಾಜ ಹಾಗೂ ಮಾತಂಗ ಮಠದ ಅಭಿವೃದ್ಧಿಗೆ ಸಹಕರಿಸುವೆ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಮಾದಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕಗಳನ್ನು ರಾಣಿ ಸಂಯುಕ್ತ ನೀಡಿದರೆ, ಸಿದ್ದಾರ್ಥ ಸಿಂಗ್‌ ಶಾಲಾ ಬ್ಯಾಗ್‌ಗಳ ಕೊಡುಗೆ ನೀಡಿದರು. ಸಂತೋಷ ಲಾಡ್‌ ಫೌಂಡೇಶನ್‌ ಪ್ರತಿಭಾವಂತ ಮಕ್ಕಳ ಖಾತೆಗಳಿಗೆ ಪ್ರತಿಭಾ ಪುರಸ್ಕಾರದ ಹಣ ಜಮೆ ಮಾಡಲಿದೆ.

ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹಂಪಿ ಮಾತಂಗ ಮಠದ ಪೂರ್ಣಾನಂದ ಭಾರತಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಎಂ‌.ಎಸ್. ದಿವಾಕರ್‌, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಮುಖಂಡರಾದ ರಾಣಿ ಸಂಯುಕ್ತ ಸಿಂಗ್‌, ದೀಪಕ್ ಸಿಂಗ್, ಸಿದ್ಧಾರ್ಥ ಸಿಂಗ್, ಎ.ಮಾನಯ್ಯ, ಮುಂಡ್ರಗಿ ನಾಗರಾಜ, ಎಚ್‌.ಹನುಮಂತಪ್ಪ, ಎಲ್‌.ಮಾರೆಣ್ಣ, ಬಲ್ಲಾಹುಣಸಿ ರಾಮಣ್ಣ, ಸುಂಕಮ್ಮ, ರಾಮಚಂದ್ರ, ಜೆ.ಶಿವಕುಮಾರ, ಗ್ಯಾನಪ್ಪ ಬಡಿಗೇರ್‌, ಎಲ್‌. ಪರಮೇಶ್ವರಪ್ಪ, ಉಮಾಪತಿ, ವೀರಸ್ವಾಮಿ, ಮಾರೆಣ್ಣ, ನಿಂಬಗಲ್‌ ರಾಮಕೃಷ್ಣ, ಎ. ಬಸವರಾಜ, ಎಚ್‌. ಶೇಷು, ಮಂಜುನಾಥ, ಮರಿದಾಸ, ಜಿ.ಬಿ. ರಾಘವೇಂದ್ರ, ಕರಿಯಪ್ಪ, ಶ್ರೀನಿವಾಸ್‌, ಭರತ್‌ ಕುಮಾರ ಮತ್ತಿತರರಿದ್ದರು.