ಸಾರಾಂಶ
ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯದವರನ್ನೂ ಅನಕ್ಷರಸ್ಥರೆಂದು ಭಾವಿಸಲಾಗುತ್ತಿದೆ. ಪ್ರಾಥಮಿಕ (ಬೇಸಿಕ್) ಕಂಪ್ಯೂಟರ್ ಶಿಕ್ಷಣ ಪಡೆದ ಪ್ರತಿಯೊಬ್ಬರು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದ್ದು ಯುವಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಬ್ಯಾಡಗಿ: ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯದವರನ್ನೂ ಅನಕ್ಷರಸ್ಥರೆಂದು ಭಾವಿಸಲಾಗುತ್ತಿದೆ. ಪ್ರಾಥಮಿಕ (ಬೇಸಿಕ್) ಕಂಪ್ಯೂಟರ್ ಶಿಕ್ಷಣ ಪಡೆದ ಪ್ರತಿಯೊಬ್ಬರು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದ್ದು ಯುವಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ 19 ಉಚಿತ ಲ್ಯಾಪಟಾಪ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ತಂತ್ರಜ್ಞಾನ ವಿಶ್ವವನ್ನೇ ಆವರಿಸಿಕೊಳ್ಳುತ್ತಿದೆ. ನಿತ್ಯವೂ ಒಂದಿಲ್ಲೊಂದು ಹೊಸ ತಂತ್ರಜ್ಞಾನ ಪರಿಚಯವಾಗುತ್ತಿದ್ದು ಇಷ್ಟೊಂದು ಬದಲಾವಣೆ ಹೊಂದುತ್ತಿರುವ ಯುಗದಲ್ಲಿ ನಾವಿದ್ದೇವೆ ಎಂದರು.ಬಹುದೊಡ್ಡ ಮಾರ್ಕೆಟ್:ಕಂಪ್ಯೂಟರ್ ಸೇರಿದಂತೆ ಇಂಟರನೆಟ್ ಬಳಕೆಯ ಸಾಧನಗಳು ಇದೀಗ ವಿಶ್ವದ ಬಹುದೊಡ್ಡ ಮಾರ್ಕೆಟ್ ಆಗಿ ಹೊರಹೊಮ್ಮಿದ್ದು ವಿಶ್ವದ ಒಟ್ಟು ವಹಿವಾಟಿನ ಶೇ.17ರಷ್ಟು ಕೇವಲ ಕಂಪ್ಯೂಟರ್ ಆಧಾರಿತ ವಹಿವಾಟು ನಡೆಯುತ್ತಿದೆ. ಕಾರಣ ವಿದ್ಯಾರ್ಥಿಗಳು ಕಾಲಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವ ಅವಶ್ಯಕತೆ ಇದ್ದು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಲ್ಲಿ ಜೀವನದಲ್ಲಿ ಮಹತ್ತರ ಸಾಧನೆ ಮಾಡಬಹುದಾಗಿದೆ ಎಂದರು.ರಾಜ್ಯದಲ್ಲೇ ಅತೀಹೆಚ್ಚು ಕಾರ್ಡ್ ರದ್ದಾದ ಜಿಲ್ಲೆ: ಕಟ್ಟಡ ಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ, ಇತ್ತೀಚೆಗೆ ಏಜೆಂಟರ ಹಾವಳಿಗೆ ಕಾರ್ಮಿಕರಲ್ಲದವರಿಗೂ ಕಾರ್ಡಗಳನ್ನು ನೀಡಿದ್ದು ನೀತಿ ನಿಯಮಗಳನ್ನು ಬಿಟ್ಟು ಲಂಚ ಕೊಟ್ಟವರಿಗೆ ಕಾರ್ಡ್ ನೀಡಲಾಗುತ್ತಿದೆ, ರಾಜ್ಯದಲ್ಲಿಯೇ ಅತೀಹೆಚ್ಚು ಡುಪ್ಲಿಕೇಟ್ ಕಾರ್ಡಗಳನ್ನು ವಿತರಿಸಿದ ಜಿಲ್ಲೆ ಎಂದು ಪ್ರಸಿದ್ಧಿ ಪಡೆದಿದ್ದು ನಾಚಿಕೆಗೇಡಿನ ಸಂಗತಿ, ಇದರಿಂದ ನೈಜವಾದ ಕಾರ್ಮಿಕರಿಗೆ ಸೌಲಭ್ಯಗಳು ಸಿಗುತ್ತಿಲ್ಲ, ಸಂಬಂಧಿಸಿದ ಅಧಿಕಾರಿಗಳು ಕಾರ್ಮಿಕರ ಕಾರ್ಡಗಳನ್ನು ವಿತರಿಸುವ ಮುನ್ನಚ್ಚರಿಕೆ ವಹಿಸುವಂತೆ ಸಲಹೆ ನೀಡಿದ ಅವರು, ಇಂತವುಗಳಿಗೆ ಕಡಿವಾಣ ಹಾಕದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ನಿಶ್ಚಿತವೆಂದು ಎಚ್ಚರಿಸಿದರು.ಜಗತ್ತನ್ನೇ ಆಳಲಿದೆ: ತಹಸೀಲ್ದಾರ್ ಫಿರೋಜ್‌ಷಾ ಸೋಮನಕಟ್ಟಿ ಮಾತನಾಡಿ, ಕಂಪ್ಯೂಟರ್ ಶಿಕ್ಷಣ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳುವುದರಲ್ಲಿ ಯಾವುದೇ ಸಂಶಯವಿಲ್ಲ. ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ಕಂಪ್ಯೂಟರ್ ಶಿಕ್ಷಣದ ಸೇರಿದಂತೆ ತಾಂತ್ರಿಕತೆ ಅಳವಡಿಸಿಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶಿಮಿ, ಮುಖಂಡರಾದ ಬೀರಣ್ಣ ಬಣಕಾರ, ಡಿ.ಎಚ್. ಬುಡ್ಡನಗೌಡ್ರ, ರಾಮಣ್ಣ ಉಕ್ಕುಂದ, ಖಾದರಸಾಬ್ ದೊಡ್ಮನಿ, ದುರ್ಗೇಶ ಗೋಣೆಮ್ಮನವರ, ಲೋಕೋಪಯೋಗಿ ಇಲಾಖೆ ಅಭಿಯಂತರ ಉಮೇಶ ನಾಯ್ಕ, ಕಾರ್ಮಿಕ ನೀರಿಕ್ಷಣಾಧಿಕಾರಿ ಮೀನಾಕ್ಷಿ ಸಿಂದಿಹಟ್ಟಿ, ಸಿಬ್ಬಂದಿಗಳಾದ ಲಲಿತಾ ಗಾಂಜಿ ಪುನೀತ ಸೇರಿದಂತೆ ಹಲವರು ಉಪಸ್ಥಿತರಿದ್ದರು.