ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ‘ಪಶ್ಚಿಮ ಘಟ್ಟ-ಪ್ರಕೃತಿಯ ಜೀವಂತ ಪ್ರಯೋಗಶಾಲೆ’ ಎಂಬ ಆಶಯದೊಂದಿಗೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಕುರಿತು ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು.

ಪಶ್ಚಿಮ ಘಟ್ಟದ ಜೀವವೈವಿಧ್ಯ, ಪರಿಸರ ವ್ಯವಸ್ಥೆಯ ಕುರಿತು ವಿಶೇಷ ಚಿಂತನ-ಮಂಥನಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ‘ಪಶ್ಚಿಮ ಘಟ್ಟ-ಪ್ರಕೃತಿಯ ಜೀವಂತ ಪ್ರಯೋಗಶಾಲೆ’ ಎಂಬ ಆಶಯದೊಂದಿಗೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಕುರಿತು ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು.

ಧರ್ಮದರ್ಶಿ ಮಾರುತಿ ಗುರೂಜಿ ಪವಿತ್ರ ಚಾತುರ್ಮಾಸ್ಯದ ಅಂಗವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ನಿರಂತರವಾಗಿ ನಡೆಯುತ್ತಿರುವ ವಿಚಾರ ಸಂಕಿರಣಗಳ ಸರಣಿಯ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಶ್ಚಿಮ ಘಟ್ಟವು ಕೇವಲ ಬೆಟ್ಟ, ಕಾಡು, ನದಿ ಮತ್ತು ಮಳೆಯ ಪ್ರದೇಶವಲ್ಲ; ಅಸಂಖ್ಯಾತ ಜೀವಿಗಳ ಬದುಕಿಗೆ ಆಧಾರವಾಗಿರುವ ಸಂಕೀರ್ಣ ಹಾಗೂ ಜೀವಂತ ಪರಿಸರ ವ್ಯವಸ್ಥೆ ಎಂಬ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಉಭಯಜೀವಿ ಸಂಶೋಧಕ ಡಾ. ಅಮಿತ ಹೆಗಡೆ ಉಭಯಜೀವಿಗಳ ಅದ್ಭುತ ಜಗತ್ತು, ವಿಶೇಷವಾಗಿ ಕಪ್ಪೆಗಳ ಬದುಕು, ಅವುಗಳ ಧ್ವನಿ ಸಂಕೀರ್ಣತೆ, ಸಂತಾನೋತ್ಪತ್ತಿ ಹಾಗೂ ಜೀವನಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು. ಪಶ್ಚಿಮ ಘಟ್ಟ, ಕರಾವಳಿ, ದ್ವೀಪಸಮೂಹ ಹಾಗೂ ಬಯಲುಸೀಮೆಯ ವಿವಿಧ ಪ್ರದೇಶಗಳಲ್ಲಿ ನಡೆಸಿದ ತಮ್ಮ ಅಧ್ಯಯನದ ಅನುಭವಗಳನ್ನು ಹಂಚಿಕೊಂಡ ಅವರು, ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಉಭಯಜೀವಿಗಳ ಮಹತ್ವ ವಿವರಿಸಿದರು.

ಇದೇ ಸಂದರ್ಭ ‘ಮಣ್ಣು ಬಂಗಾರಕ್ಕಿಂತ ಶ್ರೇಷ್ಠ’ ಎಂಬ ಆಶಯದೊಂದಿಗೆ ಪರಿಸರ ಚಿಂತಕ ಹಾಗೂ ಸಂರಕ್ಷಣಾ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ‘ಮಣ್ಣು ಮತ್ತು ಸೂಕ್ಷ್ಮಾಣು ಜೀವಿಗಳು’ ಎಂಬ ವಿಷಯದ ಕುರಿತು ಮಾತನಾಡಿದರು.

ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ತಮ್ಮ ತಂಡದೊಂದಿಗೆ ಆಗಮಿಸಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪರಿಸರ ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು. ಬಳಿಕ ಮಾತನಾಡಿದ ಅವರು, ಪಶ್ಚಿಮ ಘಟ್ಟ ನಮ್ಮ ಪಾಲಿಗೆ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಇದು ನಮ್ಮ ನೀರು, ಕಾಡು, ಜೀವವೈವಿಧ್ಯ ಮತ್ತು ಬದುಕಿನ ಮೂಲ. ಪ್ರಕೃತಿಯ ಬಗ್ಗೆ ಅರಿವು ಮೂಡಿಸುವ ಇಂತಹ ಸಂವಾದಗಳು ಸಮಾಜದಲ್ಲಿ ಇನ್ನಷ್ಟು ನಡೆಯಬೇಕು. ವಿಶೇಷವಾಗಿ ಯುವಜನರು ಮತ್ತು ವಿದ್ಯಾರ್ಥಿಗಳು ಪ್ರಕೃತಿಯನ್ನು ಅರಿತು, ಅದರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ನಡೆಯುತ್ತಿರುವ ಪಶ್ಚಿಮ ಘಟ್ಟ ಸಂರಕ್ಷಣೆಯ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪಶ್ಚಿಮ ಘಟ್ಟವನ್ನು ಸಂರಕ್ಷಿಸುವುದು ಎಂದರೆ ಕೇವಲ ಮರಗಳನ್ನು ಉಳಿಸುವುದಲ್ಲ; ಅದರ ಮಣ್ಣು, ನೀರು, ಉಭಯಜೀವಿಗಳು, ಸೂಕ್ಷ್ಮಜೀವಿಗಳು ಮತ್ತು ಸಂಪೂರ್ಣ ಜೀವವೈವಿಧ್ಯವನ್ನು ಸಂರಕ್ಷಿಸುವುದು. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಪಾತ್ರವಿದೆ. ಅದನ್ನು ಅರಿತಾಗ ಮಾತ್ರ ನಿಜವಾದ ಸಂರಕ್ಷಣೆಯ ಸಂಕಲ್ಪ ಸಾಧ್ಯ ಎಂದು ಗುರೂಜಿ ತಿಳಿಸಿದರು.

ಪರಿಸರಾಸಕ್ತರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಕ್ಷೇತ್ರಗಳ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರೊಂದಿಗೆ ಸಂವಾದ ನಡೆಸಿದರು.