ಅಪರಾಧಮುಕ್ತ ಮಹಾನಗರಕ್ಕೆ ಯುವ ಸಮೂಹ ಕೈಜೋಡಿಸಲಿ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Mar 10 2025, 12:18 AM IST

ಅಪರಾಧಮುಕ್ತ ಮಹಾನಗರಕ್ಕೆ ಯುವ ಸಮೂಹ ಕೈಜೋಡಿಸಲಿ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಇಲಾಖೆಗಳು ಹೆಚ್ಚು ಜನಪರ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಹುಬ್ಬಳ್ಳಿ: ಮಾದಕ ವಸ್ತುಗಳ ಮತ್ತು ಸಂಚಾರಿ ನಿಯಮಗಳ ಬಗ್ಗೆ ನಿರಂತರವಾಗಿ ಜನಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಹು-ಧಾ ಮಹಾನಗರ ಅಪರಾಧ ಮುಕ್ತವಾಗಿ ಮಾಡಲು ಪೊಲೀಸ್ ಮತ್ತು ಜಿಲ್ಲಾಡಳಿತದೊಂದಿಗೆ ಯುವಸಮೂಹ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಕರೆನೀಡಿದರು.

ಭಾನುವಾರ ಹು-ಧಾ ಮಹಾನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಡ್ರಗ್ಸ್, ಅಪರಾಧ ಮುಕ್ತ ನಗರ ನಿರ್ಮಾಣ ಕುರಿತು ಹಮ್ಮಿಕೊಂಡಿದ್ದ ಪೊಲೀಸ್ ಹಾಗೂ ನಾಗರಿಕರಿಂದ ಕೂಡಿದ್ದ ಪೊಲೀಸ್ ರನ್- 2025 ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

ಇಲಾಖೆಗಳು ಹೆಚ್ಚು ಜನಪರ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಹಾಗೂ ರಸ್ತೆ ಅಪಘಾತಗಳನ್ನು ತಪ್ಪಿಸಿ ಸಂಚಾರ ನಿಯಮಗಳನ್ನು ಉತ್ತಮವಾಗಿ ನಿರ್ವಹಿಸಲು ಯುವಕ, ಯುವತಿಯರ ಸಹಕಾರ ಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ, ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಮಹಾನಗರವನ್ನು ಶಾಂತಿ ಮತ್ತು ಸುಂದರ, ಅಪರಾಧ ಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಹತ್ತಾರು ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸಿ, ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ವಿಸುತ್ತಿದೆ. ಪ್ರತಿಯೊಬ್ಬರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಬೇಕು. ಅದನ್ನು ಸಾಧಿಸುವುದರಿಂದ ಉತ್ತಮ ವಾತಾವರಣ ಕಾಣಲು ಸಾಧ್ಯವಾಗುತ್ತದೆ ಎಂದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಜಿಲ್ಲೆಯನ್ನು ಡ್ರಗ್ಸ್ ಮುಕ್ತಗೊಳಿಸಲು ತಮ್ಮೆಲ್ಲರ ಸಹಕಾರ ಅವಶ್ಯಕ. ಮಹಾನಗರ ಸೇರಿ ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತದಲ್ಲಿ ಸುಮಾರು 500 ಜನರ ಜೀವ ಹಾನಿ ಆಗುತ್ತಿದೆ. ಇದು ದೇಶದಲ್ಲಿ 1.50 ಲಕ್ಷದಷ್ಟಿದೆ. ಬಹುತೇಕ ಪ್ರಕರಣಗಳಿಗೆ ಮದ್ಯ ಸೇವನೆ, ಸ್ಪೀಡ್ ಡ್ರೈವಿಂಗ್ ಮತ್ತು ನಿರ್ಲಕ್ಷ್ಯದ ಚಾಲನೆ ಕಾರಣವಾಗಿವೆ ಎಂದರು.

ಈ ವೇಳೆ ಮಾಜಿ ಸಂಸದ ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ, ಡಿಸಿಪಿಗಳಾದ ರವೀಶ ಸಿ.ಆರ್., ಮಹಾನಿಂಗ ನಂದಗಾಂವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ, ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ, ವಸಂತ ಹೊರಟ್ಟಿ ಸೇರಿದಂತೆ ನಗರದ ವಿವಿಧ ಗಣ್ಯರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಮುಖಂಡರು ಭಾಗವಹಿಸಿದ್ದರು.5 ಕಿಮೀ, 10 ಕಿಮೀ ಮ್ಯಾರಥಾನ್

ನಗರದ ಚೆನ್ನಮ್ಮ ವೃತ್ತದಿಂದ ಆರಂಭವಾದ ಮ್ಯಾರಾಥಾನ್ 5 ಕಿಮೀ ಹಾಗೂ 10 ಕಿಮೀ ವರೆಗೆ ಸಂಚರಿಸಿ ತೋಳನಕೆರೆಗೆ ಆಗಮಿಸಿ ಸಮಾರೋಪಗೊಂಡಿತು. ಈ ವೇಳೆ 5 ಕಿಮೀ ಓಟದಲ್ಲಿ ನವೀನ ಪಾಟೀಲ ಪ್ರಥಮ, ಸಂಗಮೇಶ ಮಾಳಿ ದ್ವಿತೀಯ, ರೋಹಿತ ಬಿಜಾಪುರ ತೃತೀಯ ಸ್ಥಾನ ಪಡೆದರು. 10 ಕಿಮೀ ಓಟದ ಮಹಿಳೆಯರ ವಿಭಾಗದಲ್ಲಿ ಸೌಜನ್ಯ ಪೂಜೇರಿ ಪ್ರಥಮ, ತನಿಶಾ ಇಂದರಗಿ ದ್ವಿತೀಯ, ನಿಖಿತಾ ಎನ್ ತೃತೀಯ ಸ್ಥಾನ ಪಡೆದರು. 10 ಕಿಮೀ ಪುರುಷರ ವಿಭಾಗದಲ್ಲಿ ಪರಸಪ್ಪ ಎಚ್. ಪ್ರಥಮ, ದೇವರಾಜ ಕೆ. ದ್ವಿತೀಯ ಹಾಗೂ ಜಯರಾಮ ವೈ.ಎಸ್. ತೃತೀಯ ಸ್ಥಾನ ಪಡೆದರು. ಗಣ್ಯರು ವಿಜೇತರಿಗೆ ಪದಕ ನೀಡಿ ಗೌರವಿಸಿದರು.