ವಿಕಸಿತ ಭಾರತ ನಿರ್ಮಾಣಕ್ಕೆ ಯುವಪೀಳಿಗೆ ಕೈಜೋಡಿಸಲಿ

| Published : Aug 16 2024, 12:48 AM IST

ಸಾರಾಂಶ

ವಿಕಸಿತ ಭಾರತ ನಿರ್ಮಾಣಕ್ಕಾಗಿ ಯುವ ಪೀಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿಕಸಿತ ಭಾರತ ನಿರ್ಮಾಣಕ್ಕಾಗಿ ಯುವ ಪೀಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆಯು ದೇಶಾದ್ಯಂತ ಇಂದು ನಡೆಯುವ ಬಹುದೊಡ್ಡ ರಾಷ್ಟ್ರೀಯ ಹಬ್ಬವಾಗಿದೆ. ನೂರಾರು ವರ್ಷಗಳ ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಲು ಹಲವರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಅಂಥ ರಾಷ್ಟ್ರ ನಾಯಕರ ಸ್ಮರಣೆ ಮಾಡುವುದು ನಮ್ಮೆಲ್ಲರ ಉಸಿರಾಗಿರಬೇಕು ಎಂದರು.

ಹಿರಿಯರ ಮಾರ್ಗದರ್ಶನದಲ್ಲಿ ಯುವ ಪೀಳಿಗೆ ಮುನ್ನಡೆಯಬೇಕು. ವಿಕಸಿತ ಭಾರತ ಯುವಜನತೆಗೆ ಹೆಚ್ಚು ಅನುಕೂಲಕರವಾಗಿದ್ದು, 2047ಕ್ಕೆ ಸಶಕ್ತ ಭಾರತವಾಗಿ ಬೆಳೆಯಲು ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಈ ದೂರದೃಷ್ಟಿ ಯೋಜನೆಯು ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣವನ್ನು ದೊರಕಿಸಿ ಕೊಡುವುದರ ಮೂಲಕ ಭವಿಷ್ಯದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಲು ವಿಕಸಿತ ಭಾರತದ ಯೋಜನೆ ಹೆಚ್ಚು ಸಹಕಾರಿಯಾಗಿದೆ. ಅಭಿವೃದ್ಧಿ ಹೊಂದಿದ ಭಾರತವಾಗಿ ರೂಪುಗೊಳ್ಳಲು ಶಿಕ್ಷಣ ಅತ್ಯವಶ್ಯಕವಾಗಿದೆ. ಎಲ್ಲರಿಗೂ ಶಿಕ್ಷಣ ದೊರಕಬೇಕಾಗಿದೆ. ಹಾಗಾಗಿ ಶಿಕ್ಷಣದ ಮೂಲಕ ವಿಕಸಿತ ಭಾರತವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳು ಸಂಪೂರ್ಣ ಜವಾಬ್ದಾರಿಯಿಂದ ತೊಡಗಿಸಿಕೊಳ್ಳಬೇಕು ಎಂದರು.

ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಜಿ.ವಿ. ವೆಂಕಟರಮಣ, ಯೋಜನೆ ಮೇಲುಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಡಾ.ವಿ.ಜಿ. ಸಿದ್ದರಾಜು, ಎನ್‌ಎಸ್ಎಸ್ ಅಧಿಕಾರಿ ಡಾ.ಮಹೇಶ್ ಕೊಡಿ ಉಗನೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ರೂಪ ಮತ್ತು ಅವರ ತಂಡ ದೇಶಭಕ್ತಿ ಗೀತೆ ಪಸ್ತುತಪಡಿಸಿದರು, ಉಪನ್ಯಾಸಕ ಬಿ.ಗುರುರಾಜು ಯರಗನಹಳ್ಳಿ ನಿರೂಪಿಸಿದರು, ಭಾಗ್ಯ ಸ್ವಾಗತಿಸಿದರು, ಸವಿತಾ ವಂದಿಸಿದರು.