ಯುವಜನತೆ ಅಂಬೇಡ್ಕರ್, ಸಂವಿಧಾನದ ಕುರಿತು ತಿಳಿಯಲಿ

| Published : Feb 25 2025, 12:46 AM IST

ಸಾರಾಂಶ

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಕುರಿತು ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಸಂವಿಧಾನ, ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಹೇಳಿದರು.

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಕುರಿತು ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಸಂವಿಧಾನ, ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಹೇಳಿದರು.

ನಗರದ ಕುವೆಂಪು ರಂಗಮಂದಿರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ “ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದ ವ್ಯವಸ್ಥೆಯು ಕವಲು ಒಡೆದ ದಾರಿಯಾಗಿದೆ. ಈ ಸಮಯದಲ್ಲಿ ಅಂಬೇಡ್ಕರ್ ಕುರಿತಾದ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ರಾಜ್ಯಾದ್ಯಂತ ವರ್ಷವಿಡಿ ನಡೆಯಬೇಕು. ಆ ಮೂಲಕ ಸಂವಿಧಾನದ ಪರಿಕಲ್ಪನೆ ಎಲ್ಲರಿಗೂ ಅರ್ಥವಾಗಬೇಕು ಎಂದರು.

ಗಣರಾಜ್ಯೋತ್ಸವ ದಿನವು ದೇಶಕ್ಕೆ ಮಹೋನ್ನತವಾಗಿದೆ. ಯಾಕೆಂದರೆ ಸಂವಿಧಾನವನ್ನು ಕೂಡ ಅದೇ ದಿವಸ ಸಮರ್ಪಿಸಲಾಗಿದೆ. ನಮ್ಮ ದೇಶಕ್ಕೆ ಸಂವಿಧಾನವನ್ನು ಸಿದ್ಧಪಡಿಸಲು ಅಂಬೇಡ್ಕರ್ ಒಳಗೊಂಡಂತೆ ಅನೇಕ ಮಹಾನೀಯರು ಹಲವು ದೇಶಗಳನ್ನು ಸುತ್ತಿ ಅಲ್ಲಿನ ಸಂವಿಧಾನವನ್ನು ಅಧ್ಯಯನ ಮಾಡಿ ಅದರಿಂದ ಅನೇಕ ಮಾಹಿತಿ ಹೆಕ್ಕಿ ತೆಗೆದು ಈ ದೇಶಕ್ಕೆ ಬೃಹತ್ ಸಂವಿಧಾನ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಮ್ಮೆಲ್ಲರ ಬದುಕಿನ ಅಸ್ತಿತ್ವ ಸಂವಿಧಾನದ ಅಡಿಯಲ್ಲಿದೆ. ಈ ನಮ್ಮ ಸಂವಿಧಾನದಲ್ಲಿ ಶರಣರು, ತುಳಿತಕ್ಕೆ ಒಳಗಾದವರ ಸಮಾನತೆಯ ಆಶಯ ಇದೆ. ಆ ದಿಸೆಯಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಅರಿತುಕೊಳ್ಳಬೇಕು. ಅದರ ಗಂಭೀರತೆ ತಿಳಿಯಬೇಕು. ಈ ಮೂಲಕ ನಾವೆಲ್ಲ ದೇಶವನ್ನು ಮುನ್ನಡೆಸಬೇಕು. ಇದನ್ನು ಮರೆತರೆ ಸಮಾಜದಲ್ಲಾಗುವ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಎಂ.ಸಂಪತ್‌ಕುಮಾರ್ ಉಪನ್ಯಾಸ ನೀಡಿ, ಧೈರ್ಯ, ಹಠ, ಛಲ ಇದ್ದರೆ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯವೆಂದು ಬ್ರಿಟನ್ ವಿದ್ವಾಂಸರು ಹೇಳಿದ್ದಾರೆ. ಅಂಬೇಡ್ಕರ್ ಅದರಂತೆ ಬಾಳಿ ಬದುಕಿದವರು. ಆ ಮೂಲಕ ದೇಶಕ್ಕೆ ಬೃಹತ್ ಸಂವಿಧಾನ ನೀಡಿದರು. ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳಾ ಸಮುದಾಯಕ್ಕೆ ಶಿಕ್ಷಣದ ಹಕ್ಕು ಕೊಟ್ಟು ಎಲ್ಲರಂತೆ ಸರಿಸಮಾನವಾಗಿ ಬಾಳಲು ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು.

ಅಂಬೇಡ್ಕರ್ ಅವರೇ ಒಂದು ಪ್ರೇರಣಾ ಶಕ್ತಿ. ಇಂದಿನ ಯುವಜನತೆ ಅವರನ್ನು ಅರ್ಥೈಸಿಕೊಂಡು ಆ ದಾರಿಯಲ್ಲಿ ಸಾಗಬೇಕು. ಆಂಬೇಡ್ಕರ್ ಅವರ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಇದೇ ವೇಳೆ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಪ್ರಬಂಧ, ರಸಪ್ರಶ್ನೆ, ಆಶುಭಾಷಣ ಹಾಗೂ ಕವನ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಪುಸ್ತಕ ಮನೆ ಪ್ರಕಾಶಕ ಸುಂದರ್ ಹಾಗೂ ಜಿಲ್ಲೆಯ ವಿವಿಧ ತಾಲೂಕಿನಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.