ಯುವಕರು ನಮ್ಮ ಸಂಸ್ಕೃತಿ ಜೀವನದಲ್ಲಿ ಆಳವಡಿಸಿಕೊಳ್ಳಿ

| Published : Jul 19 2025, 01:00 AM IST

ಸಾರಾಂಶ

ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವ ಜನತೆಯ ಮೇಲಿದೆ ಎಂದು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವ ಜನತೆಯ ಮೇಲಿದೆ ಎಂದು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಸಲಹೆ ನೀಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಲೆ ಮಹದೇಶ್ವರಬೆಟ್ಟದ ಸಾಲೂರು ಮಠದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಮಲೆ ಮಹದೇಶ್ವರ ದತ್ತಿ, ಸಾಲೂರು ಮಠದ ಲಿಂಗೈಕ್ಯೆ ಪಟ್ಟದ ಶ್ರೀ ಗುರುಸ್ವಾಮಿ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಆಧುನಿಕ ಜಗತ್ತಿನಲ್ಲಿ ನಾವುಗಳು ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ಆಕರ್ಷಿತರಾಗುತ್ತಿದ್ದೇವೆ. ಇದರಿಂದ ನಮ್ಮ ಸ್ಥಳೀಯ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳನ್ನು ಕಡೆಗಣಿಸುತ್ತಿದ್ದು, ಇದರಿಂದ ಸಮಾಜಕ್ಕೆ ಮಾರಕವಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಯುವಕರಾದಿಯಾಗಿ ಎಲ್ಲರೂ ನಮ್ಮತನವನ್ನು ಮೈಗೂಡಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ದಾನಿಗಳ ಸಹಾಯದಿಂದ ದತ್ತಿಗಳನ್ನು ಸ್ಥಾಪಿಸಿ ಯುವ ಪೀಳಿಗೆಯಲ್ಲಿ ಉಪನ್ಯಾಸದ ಮೂಲಕ ಜಾಗೃತಿ ಮೂಡಿಸುತ್ತಿರುವ ಸುತ್ತೂರು ಸಂಸ್ಥಾನದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಟ ನಾಗಭೂಷಣ್ ಮಾತನಾಡಿ, ಮಲೆ ಮಹದೇಶ್ವರರರು ತಮ್ಮ ಪವಾಡಗಳ ಮೂಲಕ ಕ್ರಾಂತಿಯನ್ನೇ ಮಾಡಿದರು. ಇಂತಹ ಪವಾಡ ಪುರುಷರು ನಮಗೆ ಆದರ್ಶವಾಗಬೇಕು. ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಅದೇ ರೀತಿ ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸ್ವಾಮಿ ಪೊನ್ನಾಚಿ ಮಾತನಾಡಿ, ಮಲೆ ಮಹದೇಶ್ವರರು ಬೆಟ್ಟ, ಗುಡ್ಡಗಳನ್ನು ಅಲೆದು ಮೌಢ್ಯದ ಕತ್ತಲಲ್ಲಿ ಇದ್ದ ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಬದುಕನ್ನು ಬದಲಾಯಿಸಿದರು. ಹಾಗಾಗಿಯೇ ಇಂದು ಅವರು ಲಕ್ಷಾಂತರ ಜನರಿಗೆ ಆರಾಧ್ಯ ಧೈವವಾಗಿದ್ದಾರೆ.ಅದೇ ರೀತಿಯಲ್ಲಿ ಸಾಲೂರು ಪಟ್ಟದ ಮಠದ ಗುರುಸ್ವಾಮೀಜಿ ಅವರು ಈ ಭಾಗದಲ್ಲಿ ಶಾಲೆಗಳನ್ನು ತೆರೆದು , ಶಿಕ್ಷಣದೊಂದಿಗೆ ದಾಸೋಹವನ್ನು ನೀಡಿ, ಶಿಕ್ಷಣ ದಾಸೋಹಿಗಳಾಗಿದ್ದಾರೆ ಎಂದರು.ಸಾನ್ನಿಧ್ಯ ವಹಿಸಿದ್ದ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ತಮ್ಮ ಆಶೀರ್ವಚನದಲ್ಲಿ, ಮಲೆ ಮಹದೇಶ್ವರರು ಮಾಡಿದ ಕ್ರಾಂತಿ ಹಾಗೂ ಜನರಲ್ಲಿ ತಂದ ಬದಲಾವಣೆ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದ್ದು, ಮಲೆ ಮಹದೇಶ್ವರರ ಆದರ್ಶವನ್ನೇ ಸಾಲೂರು ಮಠದ ಲಿಂಗೈಕ್ಯ ಪಟ್ಟದ ಗುರುಸ್ವಾಮಿಯವರು ಅಳವಡಿಸಿಕೊಂಡು ಮಠವನ್ನು ಕಟ್ಟಿ ಬೆಳೆಸಿದರು. ಈ ಭಾಗದಲ್ಲಿ ಶಿಕ್ಷಣ ದಾಸೋಹವನ್ನು ನೀಡಿ ಜನತೆಯಲ್ಲಿ ಅಕ್ಷರ ಬಿತ್ತಿದರು ಎಂದು ಸ್ಮರಿಸಿದರು.ಇದೇ ಸಂದರ್ಭದಲ್ಲಿ ಸಾಲೂರು ಮಠ ಮತ್ತು ಶಿಕ್ಷಣ ಸಂಸ್ಥೆಗಳ ವತಿಯಿಂದ ಚಾಮರಾಜನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿಗೆ ಲಿಂಗೈಕ್ಯ ಪಟ್ಟದ ಶ್ರೀ ಗುರುಸ್ವಾಮೀಜಿ ಅವರ ಹೆಸರಲ್ಲಿ ದತ್ತಿ ಸ್ಥಾಪನೆ ಮಾಡಿ ಸಂಬಂದಿಸಿದ 25 ಸಾವಿರ ರೂ. ಮೊತ್ತವನ್ನು ದತ್ತಿಯಾಗಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಪರಿಷತ್ ವತಿಯಿಂದ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮಲ್ಲಿ 32 ದತ್ತಿಗಳಿದ್ದು, ಅವುಗಳಿಗೆ ಅನುಸಾರ ಕಾರ್ಯಕ್ರಮಗಳನ್ನು ಅರ್ಥಪೂರ್ಣ ರೀತಿಯಲ್ಲಿ ಆಯೋಜಿಸುತ್ತಾ ಬರಲಾಗುತ್ತಿದೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್ ಮಾತನಾಡಿ, ಲಿಂಗೈಕ್ಯ ಸುತ್ತೂರು ಜಗದ್ಗುರು ಡಾ. ರಾಜೇಂದ್ರ ಸ್ವಾಮೀಜಿ ಸ್ಥಾಪಿಸಿದ ಶರಣ ಸಾಹಿತ್ಯ ಪರಿಷತ್ ಇಂದು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಸಮಾಜ ಸುಧಾರಣೆ, ವಚನ ಸಾಹಿತ್ಯ , ಧರ್ಮ ಚಿಂತನೆಗಳನ್ನು ಪ್ರಚುರ ಪಡಿಸುವ ಕೆಲಸ ಮಾಡುತ್ತಿದೆ ಎಂದರು.ದತ್ತಿ ದಾನಿಗಳಾದ ಚಾಮರಾಜನಗರ ಎಪಿಎಂಸಿ ಮಾಜಿ ನಿರ್ದೇಶಕ ಎಂ. ವಿಶ್ವನಾಥ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಸಾಲೂರು ಮಠದ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಪ್ರಾಚಾರ್ಯ ಮಹದೇವಸ್ವಾಮಿ ಪ್ರಭು ವಂದಿಸಿದರು. ಮಹದೇಶ್ವರಬೆಟ್ಟದ ಬೇಡಗಂಪಣ ಸಮುದಾಯದ ಮುಖಂಡರು, ಮಹದೇಶ್ವರರ ಭಕ್ತರು, ವಿದ್ಯಾರ್ಥಿಗಳು ಹಾಜರಿದ್ದರು.