ಯುವಜನಾಂಗಕ್ಕೆ ತಂಬಾಕು ಉತ್ಪನ್ನ, ಮಾದಕ ವಸ್ತು ಸಿಗದಿರಲಿ

| Published : Oct 09 2024, 01:35 AM IST

ಸಾರಾಂಶ

ನಮ್ಮ ಯುವಪೀಳಿಗೆ ತಂಬಾಕಿಗೆ ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಎಡಿಸಿ ಪಿ.ಎನ್.ಲೋಕೇಶ ಸೂಚನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ನಮ್ಮ ಯುವಪೀಳಿಗೆ ತಂಬಾಕಿಗೆ ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಂಬಾಕು ಉತ್ಪನ್ನಗಳ ವ್ಯಾಪಾರಸ್ಥರಿಗೆ ಪ್ರತ್ಯೇಕ ಪರವಾನಗಿ ನೀಡುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರು ತಂಬಾಕು ಉತ್ಪನ್ನಗಳಿಗೆ ಬಲಿ ಆಗುವುದನ್ನು ತಡೆಟ್ಟಲು ಮಾರ್ಗಸೂಚಿ ಅನ್ವಯ ಪರವಾನಿಗೆ ಕಡ್ಡಾಯವಾಗಿ ಅನುಷ್ಠಾನ ಮಾಡುವುದು ಹಾಗೂ ಶಾಲಾ, ಕಾಲೇಜುಗಳ ಸುತ್ತಮುತ್ತ ಅಂಗಡಿಗಳಿಗೆ ಕೋಟ್ಪಾ ಕಾಯ್ದೆ ಅನುಸಾರ ಕ್ರಮ ವಹಿಸುವುದು ಹಾಗೂ ತಂಬಾಕುಮುಕ್ತ ಯುವಪೀಳಿಗೆಗಾಗಿ ನಾವೆಲ್ಲರೂ ಶ್ರಮವಹಿಸಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಮಾತನಾಡಿ, ಈಗಾಗಲೇ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ಉದ್ಯಮ ಪರವಾನಗಿ ಅನುಷ್ಠಾನಗೊಂಡಿದೆ. ರಾಜ್ಯದಲ್ಲಿ ಮಾದರಿ ಮಹಾನಗರ ಪಾಲಿಕೆಯಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನ ಈ ತರಬೇತಿ ಉದ್ದೇಶವಾಗಿದೆ ಎಂದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ ಕಲಾಹಾಳ ಮಾತನಾಡಿ, ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಯುವಕರು ದುಶ್ಚಟಗಳಿಗೆ ಬಲಿ ಆಗುವುದರ ಕುರಿತು ವೀಡಿಯೋ ಪ್ರದರ್ಶನ ಮೂಲಕ ಎಲ್ಲ ತಂದೆ, ತಾಯಿಂದಿರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಲು ಮಾಹಿತಿ ನೀಡಿದರು.

ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಡಾ. ಎನ್.ಮಹಂತೇಶ, ವಿಭಾಗೀಯ ಸಂಯೋಜಕ ಮಹಾಂತೇಶ ಬಿ. ಉಳ್ಳಾಗಡ್ಡಿ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್, ಹರಿಹರ ನಗರಸಭೆ ಪೌರಾಯುಕ್ತ ಸುಬ್ರಮಣ್ಯ ಪಿ., ಚನ್ನಗಿರಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಮಹಾನಗರ ಪಾಲಿಕೆ ಆರೋಗ್ಯ ನೀರಿಕ್ಷಕರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರು ಹಾಜರಿದ್ದರು.

- - - -8ಕೆಡಿವಿಜಿ41ಃ:

ದಾವಣಗೆರೆಯಲ್ಲಿ ತಂಬಾಕು ಪರವಾನಗಿ ತರಬೇತಿ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ ಉದ್ಘಾಟಿಸಿದರು.