ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದ ಭವ್ಯವಾದ ಕಲೆ, ಸಂಸ್ಕೃತಿ, ಜನಪದವೂ ಸೇರಿದಂತೆ ಅನೇಕ ಕಲಾ ಪ್ರಕಾರಗಳನ್ನು ಯುವಜನತೆ ಮೈಗೂಡಿಸಿಕೊಳ್ಳುವ ಮೂಲಕ ಅವುಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ರಾಷ್ಟ್ರೀಯ ಯುವಜನೋತ್ಸವ ಸಮಿತಿ ಸದಸ್ಯ ಡಾ.ಜಾವೀದ ಜಮಾದಾರ ಹೇಳಿದರು.ನಗರದ ಬಿಎಲ್‌ಡಿಇ ನ್ಯೂ ಕ್ಯಾಂಪಸ್‌ನ ಎ.ಎಸ್.ಪಾಟೀಲ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಬಿಎಲ್‌ಡಿಇ ಸಂಸ್ಥೆ, ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನ್, ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ-ಕಾಲೇಜುಗಳಲ್ಲಿ ಸಂಸ್ಕೃತಿ, ಕಲೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಮಕ್ಕಳನ್ನು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಬಾಲ್ಯದಿಂದಲೇ ಪ್ರೇರಣೆ ನೀಡಬೇಕು. ಅವರಿಗೆ ಜಾನಪದ ಕಲೆಗಳ ಅಭಿರುಚಿಯನ್ನು ಬೆಳೆಸಬೇಕು. ಇಂದಿನ ಯುವಕರು ನಮ್ಮ ದೇಶದ ಪರಂಪರೆಯನ್ನು ಗಟ್ಟಿಗೊಳಿಸಲು, ಇವುಗಳೆಡೆಗೆ ಹೆಚ್ಚು ಒತ್ತು ನೀಡುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ ಮಾತನಾಡಿ, ಬದುಕು ಬದಲಾಯಿಸುವ ಬಹುದೊಡ್ಡ ಆಯುಧ ನಮ್ಮ ಕಲೆ ಹಾಗೂ ಸಂಸ್ಕೃತಿ. ಇವುಗಳನ್ನು ಸ್ಪರ್ಧೆಗೆ ಮಾತ್ರ ಸೀಮಿತಗೊಳಿಸದೇ ನಮ್ಮ ಬದುಕಿನ, ಜೀವನದ ಕ್ರಮವಾಗಬೇಕು. ಕಲೆ ಸಂಸ್ಕೃತಿ ದೈನಂದಿನ ಬದುಕಿನ ಭಾಗವಾಗಿಸಬೇಕು ದುಡ್ಡಿಗೆ ಮಾತ್ರ ಸೀಮಿತಗೊಳಿಸದೆ ನಮ್ಮ ಬದುಕಿನ ಭಾಗವಾಗಬೇಕು. ಇಂದಿನ ಯುವಜನತೆ ನಮ್ಮ ದೇಶದ ಭವ್ಯ ಸಂಸ್ಕೃತಿ ಕಲೆಗಳಿಗೆ ಹೆಚ್ಚು ಹೊತ್ತು ನೀಡುವುದರೊಂದಿಗೆ ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಾಚಾರ್ಯ ಬಿ.ಎಸ್.ಬೆಳಗಲಿ ಮಾತನಾಡಿ, ಇದು ಯುವ ಜನರ ಉತ್ಸವವಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚಿನ ಯುವಕರನ್ನು ಹೊಂದಿರುವ ದೇಶ ಭಾರತ. ಆದ್ದರಿಂದ ಇಂತಹ ಯುವಶಕ್ತಿಯನ್ನು ಉತ್ತಮ ವಿಚಾರಗಳಿಂದ ಬೆಳೆಸಬೇಕಾಗಿದೆ. ಕಲೆ, ಸಾಹಿತ್ಯ ಸಂಸ್ಕೃತಿ ಅವರಲ್ಲಿ ಬೆಳೆಸಬೇಕಾಗಿದೆ. ನಮ್ಮ ಭಾಗದಲ್ಲಿ ಡೊಳ್ಳಿನ ಕುಣಿತ, ಹಂತಿಯ ಹಾಡು, ಸೋಬಾನೆ ಮುಂತಾದ ಜನಪದಿಯ ಕಲೆಗಳಿದ್ದು, ಅವುಗಳನ್ನು ಯುವಪೀಳಿಗೆ ಕಲಿಯಬೇಕು ಎಂದು ಸಲಹೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮಲ್ಲಿರುವ ಕಲೆಯನ್ನು ಹೊರಹಾಕಲು ಯುವಜನೋತ್ಸವದಂತಹ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಏಕ ಜನಪದ ನೃತ್ಯ, ಸಮೂಹ ಜನಪದ ನೃತ್ಯ, ಕಥೆ ಬರೆಯುವುದು, ಕವನ ರಚನೆ, ವಿಜ್ಞಾನ ಮಾದರಿಗಳ ಪ್ರದರ್ಶನ, ಚಿತ್ರಕಲೆ, ಗುಡಿ ಕೈಗಾರಿಕೆ ಕಲಾ ಪ್ರಕಾರ, ನೇಕಾರಿಕೆ/ಜವಳಿ, ಕೃಷಿ ಉತ್ಪನ್ನ ಸೇರಿದಂತೆ ಅನೇಕ ವಿಷಯಾಧಾರಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ನೆಹರು ಯುವ ಕೇಂದ್ರದ ಅಧಿಕಾರಿ ರಾಹುಲ್ ಡೋಂಗರೆ, ಸಂಜೀವ ಖೋತ, ಸಂತೋಷಕುಮಾರ ನಿಗಡಿ, ಎಸ್.ಬಾಲಾಜಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬೂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿರೇಶ್ ವಾಲಿ ಹಾಗೂ ತಂಡದಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ನಿವೃತ್ತ ಶಿಕ್ಷಕ ಎಚ್.ಎ.ಮಮದಾಪೂರ ನಿರೂಪಿಸಿದರು.ಕೋಟ್
ಈ ನೆಲದ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಸಂಸ್ಕೃತಿ-ಕಲೆಯನ್ನು ದೇಶ-ವಿದೇಶಗಳಲ್ಲಿ ಅನುಸರಿಸಲಾಗುತ್ತದೆ. ದೇಶದ ಯುವ ಜನ ಪಾಶ್ಚಾತ್ಯ ಶೈಲಿಗೆ ಮಾರು ಹೋಗದೇ, ನಮ್ಮಲ್ಲಿರುವ ಕಲೆ, ಸಂಸ್ಕೃತಿಯನ್ನು ಬೆಳೆಸುವ ಮನೋಭಾವ ಹೊಂದಬೇಕು.ಡಾ.ಜಾವೀದ ಜಮಾದಾರ, ರಾಷ್ಟ್ರೀಯ ಯುವಜನೋತ್ಸವ ಸಮಿತಿ ಸದಸ್ಯ