ಕಪ್ಪತ್ತಗುಡ್ಡದ ರಕ್ಷಣೆಗೆ ಯುವಪೀಳಿಗೆ ನಿಲ್ಲಲಿ

| Published : Oct 09 2024, 01:40 AM IST

ಸಾರಾಂಶ

ಔಷಧಿ ಸಸ್ಯ ಸಂಕುಲ, ಉತ್ತಮ ಹವಾಗುಣ, ಶುದ್ಧ ಜಲಸಂಪತ್ತು ಇರುವ ಕಪ್ಪತ್ತಗುಡ್ಡದ ಮೇಲೆ ದುಷ್ಟ ಶಕ್ತಿಗಳು ಕಣ್ಣಿಟ್ಟಿವೆ. ಇದನ್ನು ಲೂಟಿ ಹೊಡೆಯಲು ಕಾಲ ಕಾಲಕ್ಕೆ ನಾನಾ ತಂತ್ರ ಮಾಡುತ್ತಿದ್ದಾರೆ.

ಧಾರವಾಡ:

ಸಸ್ಯ ಮತ್ತು ಜೀವ ಸಂಕುಲದ ಪ್ರತೀಕವಾಗಿರುವ ಕಪ್ಪತ್ತಗುಡ್ಡ ರಕ್ಷಣೆಗೆ ನಿರಂತರ ಹೋರಾಟ ಮತ್ತು ಜಾಗೃತಿ ಅನಿವಾರ್ಯವಾಗಿದೆ. ಅದನ್ನು ಸಂರಕ್ಷಿಸುವ ಹೊಣೆ ಯುವಪೀಳಿಗೆ ಮೇಲಿದೆ ಎಂದು ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಪ್ರತಿಪಾದಿಸಿದರು.

ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಾಂಧಿ ಅಧ್ಯಯನ ವಿಭಾಗ ಹಮ್ಮಿಕೊಂಡಿದ್ದ ಸಮಕಾಲಿನ ಪರಿಸರ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧಿ ಚಿಂತನೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಔಷಧಿ ಸಸ್ಯ ಸಂಕುಲ, ಉತ್ತಮ ಹವಾಗುಣ, ಶುದ್ಧ ಜಲಸಂಪತ್ತು ಇರುವ ಕಪ್ಪತ್ತಗುಡ್ಡದ ಮೇಲೆ ದುಷ್ಟ ಶಕ್ತಿಗಳು ಕಣ್ಣಿಟ್ಟಿವೆ. ಇದನ್ನು ಲೂಟಿ ಹೊಡೆಯಲು ಕಾಲ ಕಾಲಕ್ಕೆ ನಾನಾ ತಂತ್ರ ಮಾಡುತ್ತಿದ್ದಾರೆ. ಆದರೆ, ಅದನ್ನು ಉಳಿಸಿಕೊಳ್ಳಲು ಯುವಪೀಳಿಗೆ ಸಜ್ಜಾಗಬೇಕು. ಯುವಕರು ವರ್ಷಕ್ಕೆ ಒಂದು ಬಾರಿಯಾದರೂ ಕಪ್ಪತ್ತಗುಡ್ಡಕ್ಕೆ ಚಾರಣ ಹೋಗಿ, ಅದರ ರಕ್ಷಣೆಗೆ ಕಂಕಣ ಕಟ್ಟಬೇಕು ಎಂದು ಸ್ವಾಮೀಜಿ ಹೇಳಿದರು.

ಪರಿಸರ ಜಾಗೃತಿ ಅಗತ್ಯ:

ಚಿತ್ರನಟ, ಪರಿಸರವಾದಿ ಸುರೇಶ ಹೆಬ್ಳೀಕರ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯಿಂದ ಪರಿಸರ ತೀವ್ರ ನಾಶವಾಗುತ್ತಿದೆ. ದೇಶಿ ಸಿದ್ದಾಂತಗಳ ಮೇಲೆ ಗಾಂಧೀಜಿ ತತ್ವಗಳ ಮೇಲೆ ಮತ್ತೆ ಪರಿಸರ ಸುಧಾರಿಸಲು ಅವಕಾಶವಿದ್ದು, ಯುವ ಪೀಳಿಗೆ ಸರಳ ಜೀವನ ರೂಢಿಸಿಕೊಳ್ಳಬೇಕು. ಆರ್ಥಿಕ ಪ್ರಗತಿ ಪರಿಸರ ನಾಶಕ್ಕೆ ಕಾರಣವಾಗದಂತಹ ದಾರಿ ಹುಡುಕಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಭಾರ ಕುಲಪತಿ ಡಾ. ಬಿ.ಎಂ. ಪಾಟೀಲ್, ಜಗತ್ತು ಎಲ್ಲರ ಆಸೆಗಳನ್ನು ಪೂರೈಸಬಲ್ಲದು, ಆದರೆ, ದುರಾಸೆಗಳನ್ನಲ್ಲ ಎಂದು ಮಹಾತ್ಮ ಗಾಂಧೀಜಿ ಮನದಟ್ಟು ಮಾಡಿದ್ದಾರೆ ಎಂದರು.

ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಶೆಟ್ಟರ ಪ್ರಾಸ್ತಾವಿಕ ಮಾತನಾಡಿ, ಗಾಂಧಿ ಮಾರ್ಗ ರೂಪಿಸಿರುವ ಸರಳ ಜೀವನ, ಮಿತ ಬಳಕೆ ಖಂಡಿತವಾಗಿಯೂ ಪರಿಸರ ರಕ್ಷಣೆಗೆ ಸಹಕಾರಿ ಎಂದು ಹೇಳಿದರು.

ಅರ್ಥಶಾಸ್ತ್ರಜ್ಞ ಡಾ. ಗೋಪಾಲ ಕಡಿಕೋಡಿ, ಪಕ್ಷಿ ತಜ್ಞ ಆರ್.ಜಿ. ತಿಮ್ಮಾಪುರ, ಹರ್ಷವರ್ಧನ ಶೀಲವಂತ, ಬಾಲಚಂದ್ರ ಜಾಬಶೆಟ್ಟಿ ಪರಿಸರ ಮತ್ತು ಗಾಂಧಿ ಚಿಂತನೆ ಕುರಿತು ವಿಷಯ ಮಂಡಿಸಿದರು. ಡಾ. ಮಹಾದೇವ ದಳಪತಿ ನಿರೂಪಿಸಿದರು. ಡಾ. ಎಸ್.ಬಿ. ಬಸೆಟ್ಟಿ ಸ್ವಾಗತಿಸಿದರು. ಧಾರವಾಡದ ಪರಿಸರವನ್ನಾದರೂ ಉಳಿಸಿಕೊಳ್ಳಲು ಈಗಲೇ ಯೋಜನೆ ರೂಪಿಸಬೇಕು. ಇಲ್ಲಿನ ಕೆರೆಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಮುಂದಿನ ಪೀಳಿಗೆಗೆ ಸುಂದರ ಧಾರವಾಡ ಮರುಸೃಷ್ಠಿ ಅಗತ್ಯ ಎಂದು ಸುರೇಶ ಹೆಬ್ಳಿಕರ ಹೇಳಿದರು.