ಯುವಕರು ಸಮಾಜಮುಖಿ ಕೆಲಸಕ್ಕೆ ಮುಂದಾಗಲಿ: ಶೇಷಮೂರ್ತಿ ಅವಧಾನಿ

| Published : Feb 01 2024, 02:05 AM IST

ಯುವಕರು ಸಮಾಜಮುಖಿ ಕೆಲಸಕ್ಕೆ ಮುಂದಾಗಲಿ: ಶೇಷಮೂರ್ತಿ ಅವಧಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಯುವಜನತೆ ನಗರದ ಯುವಕರನ್ನು ಹೋಲಿಸಿಕೊಂಡು ಕೀಳರಿಮೆಯಲ್ಲಿ ನರಳುವುದನ್ನು ಕಂಡಿದ್ದೇನೆ. ಯಾರಿಗೇನು ಕಮ್ಮಿ ತಾವಲ್ಲವೆಂಬುದನ್ನು ಅರಿತುಕೊಂಡು ಸಮಾಜಮುಖಿ ಕೆಲಸಗಳತ್ತ ಲಕ್ಷ ಇಡಬೇಕು,

ಕನ್ನಡಪ್ರಭ ವಾರ್ತೆ ಕಲಬುರಗಿ

ಬದಲಾದ ಇಂದಿನ ದಿನಮಾನಗಳಲ್ಲಿ ಕವಲು ದಾರಿಯಲ್ಲಿ ಜೀವನ ನಡೆಸುತ್ತಿರುವ ಇಂದಿನ ಯುವಕರಿಗೆ ಆತ್ಮಸ್ಥೈರ್ಯ ಮುಖ್ಯವಾಗಿದೆ. ಧೃಢ ಸಂಕಲ್ಪದಿಂದ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಮಾಜ ಸೇವೆ ಮಾಡಲು ಇಂದಿನ ಯುವಕರು ಮುಂದೆ ಬರಬೇಕೆಂದು ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಹೈಕಶಿ ಸಂಸ್ಥೆಯ ಎಂಎಸ್ಐ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆಯಲ್ಲಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಮೊದಲು ತಮ್ಮಲ್ಲಿರುವ ಶಕ್ತಿ, ಸಾಮರ್ಥ್ಯದ ಬಗ್ಗೆ ಅರಿಯಬೇಕು, ಅದರಲ್ಲೂ ಗ್ರಾಮೀಣ ಯುವಜನತೆ ನಗರದ ಯುವಕರನ್ನು ಹೋಲಿಸಿಕೊಂಡು ಕೀಳರಿಮೆಯಲ್ಲಿ ನರಳುವುದನ್ನು ಕಂಡಿದ್ದೇನೆ. ಯಾರಿಗೇನು ಕಮ್ಮಿ ತಾವಲ್ಲವೆಂಬುದನ್ನು ಅರಿತುಕೊಂಡು ಸಮಾಜಮುಖಿ ಕೆಲಸಗಳತ್ತ ಲಕ್ಷ ಇಡಬೇಕು, ಹಾಗಂತ ಬೇರೆಲ್ಲವನ್ನು ಬಿಟ್ಟು ಬಿಡಬೇಕು ಅಂತಲ್ಲ, ಎಲ್ಲರ ಜೊತೆಗೆ, ಎಲ್ಲ ಸಕಾರಾತ್ಮಕ ವಿಷಯಗಳಲ್ಲಿ ಆಸಕ್ತಿ ತೋರುವ ಮೂಲಕ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಬೇಕೆಂದರು.

ಸ್ವಯಂ ಸೇವೆ ಎನ್ನುವುದು ತುಂಬ ಮಹತ್ವದ್ದಾಗಿದೆ. ಎಲ್ಲರು ತಮ್ಮ ಇತಿಮಿತಿಗಳಲ್ಲಿ ಜವಾಬ್ದಾರಿ, ಹೊಣೆಗಾರಿಕೆ ಅರಿತು ದೇಶ ಕಟ್ಟುವ ಸೇವೆಗಳಲ್ಲಿ, ಪರೋಪಕಾರದ ಸೇವೆಗಳಲ್ಲಿ ತೊಡಗುವ ಮೂಲಕ ತಮ್ಮ ಭವಿತವ್ಯ ಕಟ್ಟಿಕೊಳ್ಳಬೇಕು, ಆ ಮೂಲಕ ದೇಶದ ಭವಿಷ್ಯಕ್ಕೂ ಭದ್ರಬುನಾದಿ ಹಾಕುವವರಾಗಬೇಕೆಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಡಾ. ಶಂಕರಪ್ಪ ಹತ್ತಿ ಅವರು, ಇಂದಿನ ಯುವಕರು ಸಮಾಜ ಸೇವೆಯ ಜೊತೆ ಪರಿಸರದ ಬಗ್ಗೆ ಕಾಳಜಿವಹಿಸಿ, ತಾವು ವಾಸವಾಗಿರುವ ಬಡಾವಣೆಗಳಲ್ಲಿರುವ ಎಲ್ಲಾ ಉದ್ಯಾನವನಗಳನ್ನು ಪ್ರತಿ ವಾರಕ್ಕೊಮ್ಮೆ ಸ್ವಚ್ಛ ಮಾಡುವ ಪ್ರಮಾಣವನ್ನು ಯುವಕರು ಮಾಡಬೇಕೆಂದು ಹೇಳಿದರು.

ಸ್ವಯಂ ಸೇವೆಯ ಮಹತ್ವ ಸಾರುತ್ತಲೇ ಸಮಾಜ ಸೇವೆಯನ್ನು ಪರಿಚಯಿಸಿದ ಡಾ. ಹತ್ತಿ ಯುವಕರು ಓದಿನ ಜೊತೆಗೇ ಸಮಾಜದಲ್ಲ್ಲಿ ತಾವು ನಿಭಾಯಿಸಬೇಕಾಗಿರುವ ಪಾತ್ರ ಅರಿತು ಸರಿಯಾಗಿ ನಿಭಾಯಿಸುತ್ತ ಸಾಗಿದಲ್ಲಿ ತಮ್ಮ ಭವಿಷ್ಯ ತಾವೇ ಕಟ್ಟಿಕೊಳ್ಳಲು ಸಾಧ್ಯವೆಂದರು.

ರೆಡ್‌ ಕ್ರಾಸ್‌ನ ಕಾರ್ಯದರ್ಶಿ ರವೀಂದ್ರ ಶಾಬಾದಿ ಮಾತನಾಡಿ, ಸ್ವಯಂ ಸೇವೆಯ ಹಲವು ಮುಖಗಳನ್ನು ಪರಿಚಯಿಸುತ್ತಲೇ ಯುವಕರು ಯಾವಾಗ ಏನು ಮಾಡಬಹುದು ಎಂಬುದನ್ನು ಉದಾಹರಮೆ ಸಮೇತ ವಿವರಿಸಿದರು. ಅಪಘಾತವಾದಾಗ ಅದರ ವಿಡಿಯೋ ಚಿತ್ರಣ ಮಾಡಿ ವೈರಲ್‌ ಮಾಡೋದಕ್ಕಿಂತ ಅಲ್ಲಿರವ ಯುವಕರು ನೊಂದವರ ನೆರವಿಗೆ ದಾವಿಸುವುದೇ ಸ್ವಯಂ ಸೇವೆ, ತೊಂದರೆಯಲ್ಲಿರುವವರತ್ತ ನೆರವಿನ ಹಸ್ತ ಚಾಚುವುದೇ ಸಮಾಜ ಸೇವೆ , ಮೊದಲು ಯುವಕರು ಇದನ್ನು ರೂಢಿಸಿಕೊಳ್ಳಿರೆಂದರು.

ಕಾರ್ಯಕ್ರಮದ ವೇದಿಕೆಯ ಮೇಲೆ ರೆಡ್ ಕ್ರಾಸ್ ಕಲ್ಬುರ್ಗಿ ಜಿಲ್ಲಾ ಶಾಖೆಯ ಸಭಾಪತಿ ಅರುಣಕುಮಾರ ಲೋಯಾ, ಉಪ ಸಭಾಪತಿ, ಸಮಾಜ ಸೇವಕಿ ಭಾಗ್ಯಲಕ್ಷ್ಮಿ ಎಂ, ರವೀಂದ್ರ ಶಾಬಾದಿ, ಎಂಎಸ್‌ಐ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಬೀರನಹಳ್ಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಜಂಟಿ ಕಾರ್ಯದರ್ಶಿ ಸುರೇಶ್ ಬಡಿಗೇರ್, ಕಾರ್ಯಕ್ರಮ ಸಂಯೋಜಕ ರಾಜೇ ಶಿವಶರಣಪ್ಪ, ಸಯ್ಯದ್ ಸನಾವುಲ್ಲಾ, ರಾಸೇಯೋ ಅಧಿಕಾರಿ ಡಾ. ಶಂಕರಪ್ಪ, ಡಾ. ಪ್ರಾಣೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.