ಸಾಧನೆ ಮಾಡಲು ಯೌವನ ಕಾಲವೇ ಅತ್ಯಂತ ಸೂಕ್ತ. ಬಾಲ್ಯದಲ್ಲಿ ಬುದ್ಧಿ, ವೃದ್ಧಾಪ್ಯದಲ್ಲಿ ಶಕ್ತಿ ಇರುವುದಿಲ್ಲ. ಆದ್ದರಿಂದ ಯುವಕರು ಇಂದ್ರೀಯಗಳನ್ನು ನಿಗ್ರಹಿಸಿ ಧರ್ಮದ ಹಾದಿಯಲ್ಲಿ ನಡೆಯಬೇಕು. ​ಮಕ್ಕಳಿಗೆ ಲಿಂಗ ಮತ್ತು ರುದ್ರಾಕ್ಷಿ ಧರಿಸುವುದರ ಮಹತ್ವವನ್ನು ಪೋಷಕರು ತಿಳಿಸಿಕೊಡಬೇಕು ಎಂದು ಸಾಲಹಳ್ಳಿಯ ಚಿಪ್ಪಲಕಟ್ಟಿ ಬೃಹನ್ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಮಹಾಲಿಂಗೇಶ್ವರ ಮಠದಲ್ಲಿ ಗುರುಲಿಂಗೇಶ್ವರ ಸ್ವಾಮೀಜಿ ೬೧ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡ ಜಂಗಮ ವಟುಗಳಿಗೆ ಅಯ್ಯಾಚಾರ, ಮಹಾಲಿಂಗೇಶ್ವರ ಸ್ವಾಮೀಜಿ ಜನ್ಮಶತಾಬ್ದಿ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ನೀಡುವುದು ಅತ್ಯಗತ್ಯ. ​ಕಲ್ಲಿಗೆ ಸಂಸ್ಕಾರ ನೀಡಿದರೆ ಅದು ಶಿಲೆಯಾಗುತ್ತದೆ, ನೀರಿಗೆ ಸಂಸ್ಕಾರ ನೀಡಿದರೆ ಪಾದೋದಕವಾಗುತ್ತದೆ ಮತ್ತು ಅನ್ನಕ್ಕೆ ಸಂಸ್ಕಾರ ನೀಡಿದರೆ ಅದು ಪ್ರಸಾದವಾಗುತ್ತದೆ. ​ಅಂತೆಯೇ, ಮಕ್ಕಳಿಗೆ ಸಂಸ್ಕಾರ ನೀಡಿದರೆ ಅವರು ಮಹಾಮಾನವ ಆಗುತ್ತಾರೆ ಎಂದರು.

ಭಕ್ತರ ಮನೆಗೆ ಪೂಜೆ-ಪುನಸ್ಕಾರಗಳಿಗೆ ಹೋಗುವ ಜಂಗಮರು ಮೊದಲು ಯೋಗ್ಯರಾಗಿರಬೇಕು. ಅವರ ನಡವಳಿಕೆ ಸರಿಯಿಲ್ಲದಿದ್ದರೆ ಭಕ್ತರು ಅವರನ್ನು ಗೌರವಿಸುವುದಿಲ್ಲ. ಜಂಗಮರು ಮಾಂಸಾಹಾರ ಅಥವಾ ನಿಷೇಧಿತ ವಸ್ತುಗಳ ಸೇವನೆಯಿಂದ ದೂರವಿರಬೇಕು. ಸಮಾಜದಲ್ಲಿ ಆದರ್ಶಪ್ರಾಯವಾಗಿ ಬಾಳಬೇಕು ಎಂದು ಸಲಹೆ ನೀಡಿದರು.

೧೦೦ಕ್ಕೂ ಅಧಿಕ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು. ನಂತರ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿಗೆ ತುಲಾಭಾರ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗುರುಲಿಂಗೇಶ್ವರ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಮಾಡಲಾಯಿತು.

ಗುರುಪಾದಯ್ಯ ಚಟ್ಟಿಮಠ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಹಿಟ್ಟಿನಮಠ, ಬಸವರಾಜ ಹಿಟ್ಟಿನಮಠ, ವಿ.ಐ. ಪಂಚಕಟ್ಟಿಮಠ, ಗುರುಲಿಂಗಯ್ಯ ಮಠಪತಿ, ಬಸಯ್ಯ ಚಟ್ಟಿಮಠ, ಬಿ.ಎಂ. ಅಯ್ಯನಗೌಡರ, ಮಹಾಂತೇಶ ಮನ್ನಯ್ಯನವರಮಠ, ಚನ್ನಯ್ಯ ಮಸಗುಪ್ಪಿಮಠ, ಸಾಗರ ಮಠದ, ಈರಣ್ಣ ಚಟ್ಟಿಮಠ, ಸಂಗಯ್ಯ ವಸ್ತ್ರದ, ಸದಾಶಿವ ಹಿರೇಮಠ, ರವಿ ಹಿರೇಮಠ, ಪರಯ್ಯ ಮಠದ, ಮೃತ್ಯುಂಜಯ ಮಠಪತಿ ಇತರರು ಇದ್ದರು.