ಸಾರಾಂಶ
ಹೊಸಪೇಟೆ: ಭಾರತದ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರಾಗಿದ್ದು, ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ವಿಜಯನಗರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯುತ್ ರೆಡ್‌ಕ್ರಾಸ್ ಘಟಕ ಹಾಗೂ ಐಕ್ಯುಎಸಿ, ಎನ್‌ಸಿಸಿ ರೇಂಜರ್ ಆ್ಯಂಡ್ ರೋವರ್ಸ್ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸುವರ್ಣ ಭವನದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶದ ಸರ್ವೋತೋಮುಖ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಬಹುಮುಖ್ಯ. ಹಾಗಾಗಿ ಯುವಕರು ಕೌಶಲ್ಯ ಬೆಳೆಸಿಕೊಂಡು, ದೇಶದ ಪ್ರಗತಿಗೆ ಕೈಜೋಡಿಸಬೇಕು. ಎಲ್ಲ ರಂಗಗಳಲ್ಲೂ ಯುವಕರಿಗೆ ವಿಫುಲವಾದ ಅವಕಾಶ ಇದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರು ಓದಿನ ಕಡೆಗೆ ಗಮನ ಹರಿಸಬೇಕು. ಖಾಸಗಿ ಹಾಗೂ ಸರ್ಕಾರಿ ಹಾಗೂ ಸ್ವಯಂ ಉದ್ಯೋಗದ ಕಡೆಗೆ ಯುವಕರು ಗಮನಹರಿಸಬೇಕು. ಕೌಶಲ್ಯ ಇದ್ದರೆ ಉದ್ಯೋಗವೂ ದೊರೆಯುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಸುಂಡಿ ಬಿ. ನಾಗರಾಜಗೌಡ ಅಧ್ಯಕತೆ ವಹಿಸಿ, ಸ್ವಾಮಿ ವಿವೇಕಾನಂದರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಭಾರತದ ಹಿರಿಮೆ- ಗರಿಮೆಯನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಅವರು ಹಾಕಿಕೊಟ್ಟ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕು ಎಂದರು.ನಗರದ ಶಾರದಾಶ್ರಮದ ಮಾತಾ ಪ್ರಮೋದಾಮಯಿಯವರು ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾರತ ರೆಡ್‌ಕ್ರಾಸ್ ಕಾರ್ಯದರ್ಶಿ ಅನ್ನಪೂರ್ಣಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ಪೇದೆ ಶೇಖರ್ ಗೌಡ ಅವರು ಸಂಚಾರಿ ನಿಯಮಗಳ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಸುಭಾಷ್ ಟಿ. ಹಾಗೂ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ವೀರೇಶ್ ಟಿ.ಎಂ., ರವಿಕಿರಣ್ ಡಿ., ಭಾರತ್ ರೆಡ್‌ಕ್ರಾಸ್ ಅಧಿಕಾರಿಗಳಾದ ರವಿಶಂಕರ್, ಶ್ರೀನಿವಾಸ್ ಮತ್ತು ಎನ್‌ಸಿಸಿ ಅಧಿಕಾರಿಗಳಾದ ಪ್ರಭುಸ್ವಾಮಿ ಟಿ.ಎಂ., ರೇಂಜರ್ ಆ್ಯಂಡ್ ರೋವರ್ಸ್ ಅಧಿಕಾರಿ ಶಿವಮಲ್ಲಿಕಾರ್ಜುನ ಮತ್ತಿತರರಿದ್ದರು. ಅಭಿನಂದನ್ ಜೋಶಿ ನಿರ್ವಹಿಸಿದರು.