ಸಾರಾಂಶ
ಯಲ್ಲಾಪರ: ಸರ್ಕಾರದ ಆರ್ಥಿಕ ನೆರವಿಲ್ಲದೇ, ಕೇವಲ ಸಂಘ, ಸಂಸ್ಥೆಗಳ, ಸಾರ್ವಜನಿಕರ ಸಹಕಾರದಲ್ಲಿ ಸರ್ಕಾರೀಕರಣದ ಉತ್ಸವಕ್ಕಿಂತಲೂ ಉತ್ತಮ ಗುಣಮಟ್ಟದ ಸಂಕಲ್ಪ ಉತ್ಸವ ಕಳೆದ ೩೮ ವರ್ಷಗಳಿಂದ ಸಂಕಲ್ಪ ಸಂಸ್ಥೆ ಹಮ್ಮಿಕೊಂಡಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಶ್ಲಾಘಿಸಿದರು.ನ. ೩ರಂದು ೩ನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ, ಮಾತನಾಡಿ, ಸಂಕಲ್ಪ ಉತ್ಸವ ನಾಡಿಗೇ ಒಂದು ಪ್ರೇರಣಾ ಉತ್ಸವವಾಗಿ ರೂಪುಗೊಂಡಿದೆ. ಆ ನಿಟ್ಟಿನಲ್ಲಿ ಪ್ರಮೋದ ಹೆಗಡೆಯವರ ಕರ್ತೃತ್ವ ಶಕ್ತಿ, ಸಾಂಸ್ಕೃತಿಕ ಸಂಪನ್ನತೆಯ ಆಸಕ್ತಿ ಇವುಗಳಿಂದಾಗಿ ರಾಜಕೀಯಕ್ಕೆ ಹೊರತಾಗಿಯೂ ಸಂಸ್ಕೃತಿ ಮೌಲ್ಯವನ್ನು ರಕ್ಷಿಸುವ ಮಹತ್ವದ ಕಾರ್ಯದಲ್ಲಿ ಮುಂದಾಗಿರುವುದು ನಮಗೆಲ್ಲಾ ಆದರ್ಶಪ್ರಾಯರಾಗಿದ್ದಾರೆ. ನಮ್ಮ ಸಂಸ್ಕೃತಿ, ಮೌಲ್ಯವನ್ನು ರಕ್ಷಿಸುವ ಹೊಣೆ ನಮ್ಮ ಯುವ ಜನಾಂಗದ ಮೇಲಿದೆ. ನಾವು ಆತ್ಮಾವಲೋಕನ ಮಾಡುವ ಕಾಲಘಟ್ಟದಲ್ಲಿದ್ದೇವೆ. ನಾವೆಲ್ಲಾ ಚಿಕ್ಕಂದಿನಲ್ಲಿರುವಾಗ ಪ್ರಮೋದ ಹೆಗಡೆಯವರ ಪ್ರಭಾವಿ ಭಾಷಣಕ್ಕೆ ಮುಗಿಬೀಳುತ್ತಿದ್ದೆವು. ಅದು ನಮಗೆಲ್ಲಾ ಪ್ರೇರಣೆ ನೀಡಿದೆ. ಅವರ ಹತ್ತಾರು ಕ್ರಿಯಾತ್ಮಕ ಸಾಧನೆಗಳು ನಮಗೆಲ್ಲ ಸ್ಫೂರ್ತಿ ನೀಡಲಿ ಎಂದರು. ಹೊನ್ನಾವರದ ಉದ್ಯಮಿ, ಬಿಜೆಪಿ ಜಿಲ್ಲಾದ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ೩೮ ವರ್ಷಗಳ ಸುದೀರ್ಘ ಕಾಲದವರೆಗೆ ಉತ್ಸವ ನಡೆಸಿಕೊಂಡು ಬರುವುದು ದೊಡ್ಡ ತಪಸ್ಸೇ ಆಗಿದೆ. ನಾಡಿನ ಹಿರಿ- ಕಿರಿಯ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಒಂದು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವುದಕ್ಕೆ ಭದ್ರ ಬುನಾದಿಯನ್ನು ಪ್ರಮೋದ ಹೆಗಡೆ ಮಾಡಿಕೊಟ್ಟಿದ್ದಾರೆ. ಇದು ಸಮಾಜಮುಖಿಯಾದ ಕಾರ್ಯ, ನಮಗೆಲ್ಲಾ ಆದರ್ಶಪ್ರಾಯವಾಗಿದೆ ಎಂದರು.ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿರಸಿಯ ವಿಶ್ವನಾಥ ಶರ್ಮ ನಾಡಗುಳಿ, ಪತ್ರಕರ್ತ ಸಿ.ಆರ್. ಶ್ರೀಪತಿ, ನಿವೃತ್ತ ಶಿಕ್ಷಕಿ ಗಂಗಾ ಖಾಂಡೇಕರ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ವಿಶ್ವನಾಥ ಶರ್ಮ ನಾಡಗುಳಿ ಮಾತನಾಡಿದರು. ಪ್ರಭಾತ ಭಟ್ಟ ವಂದೇ ಮಾತರಂ ಗೀತೆ ಹಾಡಿದರು. ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಹಕಾರಿಗಳಾದ ಉಮೇಶ ಭಾಗ್ವತ, ಸುಬ್ಬಣ್ಣ ಬೋಳ್ಮನೆ, ಆರ್.ಎಸ್. ಭಟ್ಟ, ಗಣಪತಿ ಮುದ್ದೇಪಾಲ, ಮಹೇಶ ದೇಸಾಯಿ, ಟಿ.ವಿ. ಕೋಮಾರ ಉಪಸ್ಥಿತರಿದ್ದರು. ಶಿಕ್ಷಕರಾದ ಚಂದ್ರಶೇಖರ ಸಿ.ಎಸ್., ಸುಬ್ರಾಯ ಭಟ್ಟ ಆನೇಜಡ್ಡಿ ಸನ್ಮಾನಪತ್ರ ವಾಚಿಸಿದರು. ಶಿಕ್ಷಕಿ ಸುವರ್ಣಲತಾ ಪಟಗಾರ ನಿರ್ವಹಿಸಿದರು. ಪ್ರದೀಪ ಯಲ್ಲಾಪುರಕರ ವಂದಿಸಿದರು.