ಸದಾಕಾಲ ಬೆಂಗಳೂರು-ದಿಲ್ಲಿ-ಗೋವಾ ಪ್ರವಾಸದಲ್ಲಿ ತಲ್ಲೀನರಾಗಿರುವ ಮಾಜಿ ಶಾಸಕಿ ಅಂಜಲಿ ನಿಂಬಾಳಕರ ಅವರು ತಮ್ಮ ಹಾಗೆ ತಾಲೂಕಿನಲ್ಲಿ ಉದ್ಯೋಗ ಸೃಷ್ಟಿಸಿ ತೋರಿಸಲಿ. ಜನರ ಕಣ್ಣಿಗೆ ಮಣ್ಣೆರೆಚುವ ಸಲುವಾಗಿ ನಿರ್ಮಿಸಲು ಹೊರಟಿದ್ದ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲಿ. ಕ್ಷೇತ್ರದಲ್ಲಿ ವಾಸವಿದ್ದು ಜನರ ಬವಣೆ ಆಲಿಸಲಿ. ನಂತರ ನನ್ನ ಬಗ್ಗೆ ಮಾತಾಡಲಿ ಎಂದು ಶಾಸಕ ವಿಠ್ಠಲ ಹಲಗೇಕರ ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಸದಾಕಾಲ ಬೆಂಗಳೂರು-ದಿಲ್ಲಿ-ಗೋವಾ ಪ್ರವಾಸದಲ್ಲಿ ತಲ್ಲೀನರಾಗಿರುವ ಮಾಜಿ ಶಾಸಕಿ ಅಂಜಲಿ ನಿಂಬಾಳಕರ ಅವರು ತಮ್ಮ ಹಾಗೆ ತಾಲೂಕಿನಲ್ಲಿ ಉದ್ಯೋಗ ಸೃಷ್ಟಿಸಿ ತೋರಿಸಲಿ. ಜನರ ಕಣ್ಣಿಗೆ ಮಣ್ಣೆರೆಚುವ ಸಲುವಾಗಿ ನಿರ್ಮಿಸಲು ಹೊರಟಿದ್ದ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲಿ. ಕ್ಷೇತ್ರದಲ್ಲಿ ವಾಸವಿದ್ದು ಜನರ ಬವಣೆ ಆಲಿಸಲಿ. ನಂತರ ನನ್ನ ಬಗ್ಗೆ ಮಾತಾಡಲಿ ಎಂದು ಶಾಸಕ ವಿಠ್ಠಲ ಹಲಗೇಕರ ಸವಾಲು ಹಾಕಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಅಧಿಕಾರಿಗಳ ಮೇಲೆ ನಿರಂತರವಾಗಿ ಒತ್ತಡ ಹೇರಿ ತಾಲೂಕಿನಲ್ಲಿ ನಿಗದಿಯಾಗಿದ್ದ ಜಿಲ್ಲಾ ಮಟ್ಟದ ಪ್ರಜಾಸೇವೆ ಆಂದೋಲನ ಎರಡೆರಡು ಬಾರಿ ರದ್ದಾಗುವಂತೆ ನೋಡಿಕೊಂಡಿದ್ದು ಅಂಜಲಿಯವರ ಸಣ್ಣತನ ತೋರಿಸುತ್ತದೆ. ಅಧಿಕಾರಿಗಳ ಮೂಲಕ ಅಕ್ರಮ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಅವರು ಹಾಕಿದ ಗೆರೆಯನ್ನು ಪೊಲೀಸ್ ಇನ್ಸಪೆಕ್ಟರ್, ತಾಪಂ ಇಒ ಮತ್ತು ತಹಸೀಲ್ದಾರ್ ದಾಟುತ್ತಿಲ್ಲ. ಅವರ ಶ್ರೀರಕ್ಷೆಯಿಂದ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದಿದೆ. ಇಡೀ ತಾಲೂಕು ಆಡಳಿತ ಕಾಂಗ್ರೆಸ್‌ನ ಮಾಜಿ ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದೆ. ಇಲ್ಲಿಯ ಜನರ ಸಮಸ್ಯೆ ಆಲಿಸಿ ಅವುಗಳಿಗೆ ಪರಿಹಾರ ಸೂಚಿಸುತ್ತಿರುವುದು ಅವರಲ್ಲಿ ಅಸಮಾಧಾನ ಉಂಟುಮಾಡಿದೆ. ಹೀಗಾಗಿ, ಸಚಿವರನ್ನು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ತಮ್ಮ ಮೇಲೆ ಕಿಡಿಕಾರುತ್ತಿದ್ದಾರೆ ಎಂದು ದೂರಿದರು.ಪ್ರಜಾಸೇವೆ ಆಂದೋಲನದ ಲೆಕ್ಕ ಕೊಡಬೇಕು:
ಸೆ.12ರಂದು ತಾಲೂಕಿನ ನಂದಗಡದಲ್ಲಿ ಮತ್ತು ಸೆ.19ರಂದು ಬೀಡಿ ಗ್ರಾಮದಲ್ಲಿ ಪ್ರಜಾಸೇವೆ ಆಂದೋಲನ ನಡೆದಿದೆ. ಆದರೆ, ಖಾನಾಪುರ ತಹಸೀಲ್ದಾರ್ ದುಂಡಪ್ಪ ಕೋಮಾರ ಈ ಆಂದೋಲನದ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ದೂರಿದರು. ಈ ಕಾರ್ಯಕ್ರಮದ ಬಗ್ಗೆ ತಹಸೀಲ್ದಾರರು ಸರಿಯಾಗಿ ಪ್ರಚಾರ ಕೈಗೊಳ್ಳದ ಕಾರಣ ಎರಡೂ ಕಡೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ನಾಗರಿಕರು ಮಾತ್ರ ಭಾಗವಹಿಸಿದ್ದಾರೆ. ಎರಡೂ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಆಹ್ವಾನಿಸಿಲ್ಲ. ಆದರೆ, ನನಗೆ ಬಂದ ಮಾಹಿತಿ ಪ್ರಕಾರ ಹೋಬಳಿ ಮಟ್ಟದ ಕಾರ್ಯಕ್ರಮಕ್ಕೆ ಸರ್ಕಾರ ₹ 1 ಲಕ್ಷ ಅನುದಾನ ನೀಡಿದ್ದು, ತಹಸೀಲ್ದಾರರು ಅಷ್ಟೊಂದು ಹಣ ಖರ್ಚು ಮಾಡಿಲ್ಲ. ಈ ಆಂದೋಲನದ ಖರ್ಚುವೆಚ್ಚದ ಬಗ್ಗೆ ಎರಡು ದಿನಗಳಲ್ಲಿ ನನಗೆ ಲೆಕ್ಕ ಕೊಡಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದ್ದಾಗಿ ತಿಳಿಸಿದರು.