ಕನ್ನಡಪ್ರಭ ವಾರ್ತೆ ಬೆಂಗಳೂರು ಎಸ್‌ಡಿಪಿಐಗೆ ಯಾವ ಕಾಂಗ್ರೆಸ್‌ ನಾಯಕರು ಹಣ ಸಹಾಯ ಮಾಡಿದ್ದಾರೆಂದು ಹೆಸರು ಹೇಳಲಿ. ಅವರ ಬಳಿ ದಾಖಲೆಗಳು ಇದ್ದರೆ ಬಹಿರಂಗಪಡಿಸಲಿ ಎಂದು ಸಚಿವ ಜಮೀರ್‌ ಅಹ್ಮದ್‌ಖಾನ್‌ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರು ಅಬ್ದುಲ್‌ ಜಬ್ಬಾರ್‌ ಅವರು ಎಸ್‌ಡಿಪಿಐಗೆ ಹಣಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.

‘ಯಾರು ಹಣ ಸಹಾಯ ಮಾಡಿದ್ದಾರೆಂಬುದನ್ನು ಬಹಿರಂಗಪಡಿಸಬೇಕು. ನನ್ನ ಹೆಸರು ಹೇಳಿದ್ದರೆ ನಾನು ಉತ್ತರ ಕೊಡುತ್ತಿದ್ದೆ. ಅಡ್ಡ ಗೋಡೆ ಮೇಲೆ ದೀಪ ಇಟ್ಟು ಹೇಳಿದರೆ ಯಾರು ಅಂತ ಹೇಳಲಿ’ ಎಂದು ಪ್ರಶ್ನಿಸಿದರು.

ಪಕ್ಷ‌ ವಿರೋಧಿ ಚಟುವಟಿಕೆಯನ್ನು ಇಂಥವರು ಮಾಡಿದ್ದಾರೆ ಎಂದು ಹೇಳಬೇಕು. ಪಕ್ಷದ ಮೇಲೆ ಅಭಿಮಾನ ಇದ್ದರೆ ಮೊದಲು ಹೆಸರು ಬಹಿರಂಗಪಡಿಸಲಿ ಎಂದರು.

ನಜೀರ್‌ ಅಹ್ಮದ್‌ ಅವರು ತುಂಬಾ ಹಿರಿಯ ನಾಯಕರು. ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ಮೊದಲು ನೋಟಿಸ್‌ ನೀಡಿ ವಿವರಣೆ ಪಡೆಯಬೇಕಾಗಿತ್ತು. ತಪ್ಪಿದ್ದರೆ ಅಮಾನತು ಮಾಡಬೇಕಿತ್ತು ಎಂದು ಸಚಿವ ಜಮೀರ್‌ ಅಹ್ಮದ್‌ಖಾನ್‌ ಹೇಳಿದ್ದಾರೆ.


ಅಬ್ದುಲ್‌ ಜಬ್ಬಾರ್ ಅವರ ವಿರುದ್ಧ ಆಗಲಿ, ನಜೀರ್‌ ಅಹ್ಮದ್ ವಿರುದ್ಧ ಆಗಲಿ ಕ್ರಮ ಕೈಗೊಳ್ಳಲು ಒಂದು ವಿಧಾನ ಇದೆ. ಅವರು ಪಕ್ಷ ವಿರೋಧಿ ಕೆಲಸ ಮಾಡಿದ್ದರೆ ಅವರನ್ನು ತೆಗೆದಿದ್ದು ತಪ್ಪು ಎಂದು ನಾನು ಹೇಳಲ್ಲ. ಆದರೆ ಆತುರದ ಕ್ರಮ ಅಗತ್ಯವಿರಲಿಲ್ಲ ಎಂದರು. ಜೆಡಿಎಸ್‌ಗೆ ಸೇರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಜಮೀರ್‌, ‘ಥೂ...ಥೂ..ಥೂ.. ಅದೆಲ್ಲ ಊಹಾಪೋಹ. ನನಗೆ ಕಾಂಗ್ರೆಸ್ ಯಾವ ರೀತಿಯಲ್ಲೂ ಕಡಿಮೆ ಮಾಡಿಲ್ಲ.‌ 2017ರಲ್ಲಿ ನಾನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದೆ. 2018ರ ಸಮ್ಮಿಶ್ರ ಸರ್ಕಾರದಲ್ಲೇ ನನ್ನನ್ನು ಕಾಂಗ್ರೆಸ್‌ ಪಕ್ಷ ಸಚಿವನನ್ನಾಗಿ ಮಾಡಿ ಐದು ಖಾತೆ ಕೊಟ್ಟಿದೆ. ಈಗಲೂ ನಾಲ್ಕು ಖಾತೆ ಕೊಟ್ಟಿದ್ದಾರೆ. ರೋಷನ್‌ ಬೇಗ್‌, ತನ್ವೀರ್‌ ಸೇಠ್‌, ಹ್ಯಾರಿಸ್‌ ಅವರಂತಹ ಹಿರಿಯ ನಾಯಕರಿದ್ದರೂ ನನಗೆ ಪಕ್ಷ ಅವಕಾಶ ನೀಡಿದೆ. ನಾನೇಕೆ ಜೆಡಿಎಸ್‌ಗೆ ಹೋಗಲಿ? ನಾನ್ಯಾಕೆ ಕುಮಾರಸ್ವಾಮಿ ಅವರ ಜತೆ ಮಾತನಾಡಲಿ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಗರು. ಅವರು ಮೊದಲು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಟಗರು ಎಂದಿಗೂ ಟಗರೇ. ಅವರು ಸೈಲೆಂಟ್‌ ಆಗಿರಬಹುದು, ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್ ಆಗುತ್ತದೆ’ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಮೇಲೆ ಕ್ರಮವಾಗುತ್ತಿದ್ದರೂ ಅಸಹಾಯಕರಾಗಿದ್ದಾರೆ ಎಂಬದರ ಕುರಿತು ಪ್ರತಿಕ್ರಿಯೆ ನೀಡಿದರು.‘ಸಿದ್ದರಾಮಯ್ಯ ಅವರಿಗೆ ಎಲ್ಲರೂ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಈಗ ಸೈಲೆಂಟ್ ಆಗಿರಬಹುದು. ಆದರೆ ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್‌ ಬರುತ್ತದೆ. ಸದ್ಯ ಅವರು ಮಾತನಾಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಪಕ್ಷದಲ್ಲಿ ಮುಸ್ಲಿಮರಿಗೆ ಯಾವುದೇ ತಾರತಮ್ಯ ಆಗಿಲ್ಲ. ಒಬ್ಬರು ನನ್ನ ಪರ ಮಾತನಾಡುತ್ತಾರೆ. ಇನ್ನೊಬ್ಬರು ಮತ್ತೊಬ್ಬರ ಪರ ಮಾತನಾಡುತ್ತಾರೆ. ಅದನ್ನೆಲ್ಲ ಪರಿಗಣಿಸಬೇಕಾಗಿಲ್ಲ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.