ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮುಂದಿನ ತಿಂಗಳು ಸಚಿವ ಸಂಪುಟ ಸಭೆಯನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಗೆ ಜಿಲ್ಲಾ ರೈತ ಸಂಘದ ಮುಖಂಡರು ಮನವಿ ಸಲ್ಲಿಸದರು.ಜಿಲ್ಲಾಧಿಕಾರಿಗಳ ಸಭಾಗಂಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಎ.ಎಂ.ಮಹೇಶ್‌ಪ್ರಭು ಜಿಲ್ಲೆಯಲ್ಲಿ ಪ್ರಮುಖ ನೀರಾವರಿ ಯೋಜನೆ ಇದ್ದರೂ ಕಾವೇರಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಹೆಚ್ಚುವರಿ ನೀರು ಬಳಕೆಗೆ ಕಬಿನಿ ಎರಡನೇ ಹಂತ ಜಾರಿಗೆ ಮುಂದಾಗಬೇಕು ಎಂದರು.ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ ೧೫೦ ಬಾಕಿ ಉಳಿಸಿಕೊಂಡಿವೆ. ಅದನ್ನು ಕೊಡಿಸಬೇಕು, ಸಕ್ಕರೆ ಟನ್ನಿಗೆ ೫೦೦೦ ಸಾವಿರ ರು. ನೀಡಬೇಕು. ಎಂಎಸ್‌ಪಿ ಮೂಲಕ ಬೆಳೆ ಖರೀದಿ ಮಾಡಬೇಕು. ಇದೀಗ ಭತ್ತ ಬೆಳೆದ ರೈತರಿಗೆ ಅನ್ಯಾಯವಾಗುತ್ತಿದ್ದು ಭತ್ತ ಖರೀದಿಸುವರೆ ಇಲ್ಲವಾಗಿದ್ದಾರೆ. ಭತ್ತದ ದರ ಇಲ್ಲದೆ ರೈತರು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಯಾವುದೇ ಬೆಳೆಗೆ ಖರೀದಿ ಕೇಂದ್ರ ತೆರೆಯುವ ಪಾಲಿಸಿ ಬದಲಾಗಬೇಕು. ಈ ಬಗ್ಗೆ ಈಗಾಗಲೇ ರೈತರು ಮತ್ತು ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದರೂ. ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ರಾಗಿ ಖರೀದಿ ಮಾಡಿದರೂ ಹಣ ನೀಡಿಲ್ಲ ಎಂದರು.ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟರೇ ರೈತರ ಮನವಿಗೆ ಧ್ವನಿಗೂಡಿಸಿ ಭತ್ತ ಬೆಳೆದರೂ ಸರಿಯಾದ ದರ ಸಿಗುತ್ತಿಲ್ಲ. ಮತ್ತು ಖರೀದಿ ಕೇಂದ್ರ ತೆರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೇತೃತ್ವದಲ್ಲಿ ಕರನಿರಾಕರಣೆ ಚಳವಳಿ ಮಾಡಿದಾಗ ರೈತರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ಅದನ್ನು ಮನ್ನಾ ಮಾಡಬೇಕು. ಕಾಡುಹಂದಿ ನವಿಲು ಮತ್ತು ಜಿಂಕೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆಯೂ ಪರಿಹಾರ ನೀಡಬೇಕು ಎಂದರು.
ರೇಷ್ಮೆ ಸಾಂಪ್ರದಾಯಿಕ ಬೆಳೆಯಾಗಿದ್ದು, ವಿಶೇಷ ಯೋಜನೆ ರೂಪಿಸುಂತೆ ರೈತರು ಪ್ರಸ್ತಾಪಿಸಿದರು. ಜಿಲ್ಲೆಗೆ ಸೀಮಿತವಾದ ಪ್ರಾಜೆಕ್ಟ್ ಮಾಡಿಸುವುದಾಗಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು. ಮಾರ್ಟಳ್ಳಿಯಲ್ಲಿ ಕೆರೆ ಮಾಡಿ ಎಂದು ರೈತರು ಕೇಳುತ್ತಿದ್ದಾರೆ ಅನುಮತಿ ನೀಡಿ. ರೈತರ ಹಾಲಿನ ಬಾಕಿ ಹಣವನ್ನು ಕೊಡಿಸಿ. ಪ್ರತಿ ಲೀಟರ್ ಹಾಲಿಗೆ ೫೦ ರು.ನಿಗದಿ ಮಾಡಬೇಕು ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ದುರಸ್ಥಿಗೊಂಡಿದ್ದು ಅಭಿವೃದ್ಧಿ ಮಾಡಬೇಕು ಎಂದರು.ಹೆಗ್ಗವಾಡಿಪುರ ಮಹೇಶ್ ಕುಮಾರ್ ಮಾತನಾಡಿ, ಖಾಸಗಿ ಪೈನಾನ್ಸ್‌ಗಳ ಮೂಲಕ ಸಾಲ ಪಡೆದ ಸ್ವಸಹಾಯ ಸಂಘಗಳ ಕುಟುಂಬ ಸಾಲ ಕಟ್ಟಲು ಸಾಧ್ಯವಾಗದೆ ಮನೆ ಬಿಟ್ಟು ಹೋಗಿದ್ದಾರೆ, ಜೊತೆಗೆ ಓದುತ್ತಿದ್ದ ಮಕ್ಕಳನ್ನು ಕರೆದುಕೊಂಡು ಹೋಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಶೀಘ್ರದಲ್ಲೇ ಸಭೆ ಕರೆದು ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಶಿವಪುರ ಮಹದೇವಪ್ಪ ಮಾತನಾಡಿ, ಗುಂಡ್ಲುಪೇಟೆ ಯಲ್ಲಿ ಸಂಚಾರ ದಟ್ಟನೆಯಾಗಿದ್ದು ಸಂಚಾರ ಠಾಣೆ ಆರಂಭ ಮಾಡಿ. ಪೂರ್ವ ಮುಂಗಾರಿನಲ್ಲಿ ಮತ್ತು ಮುಂಗಾರಿನಲ್ಲಿ ಬೆಳೆ ಹಾನಿಯಾಗಿದ್ದರೂ ಪರಿಹಾರ ನೀಡಬೇಕು, ಬೆಳೆಹಾನಿ ಪರಿಹಾರ ನೀಡದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳಿ ಎಂದರು.
ಶೈಲೇಂದ್ರ ಮಾತನಾಡಿ, ಸತ್ತೇಗಾಲ ಬಳಿ ರಾ.ಹೆದ್ದಾರಿಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಸರ್ವೀಸ್ ರಸ್ತೆ ಮಾಡಿಸಿ ಎಂದಾಗ ಸಚಿವ ವೆಂಕಟೇಶ್ ಪ್ರಾಜೆಕ್ಟ್‌ನಲ್ಲಿ ಸೇರಿಸಿ ಆಧಿಕಾರಿಗಳಿಗೆ ಸೂಚನೆ ನೀಡಿದರು, ಹೊನ್ನೂರು ಬಸವಣ್ಣ ಮಾತನಾಡಿ, ಪೂರ್ಣ ಪ್ರಮಾಣದಲ್ಲಿ ರೈತರು ಸಭೆ ಕರೆದು ರೈತರ ಸಭೆ ಕರೆಯಬೇಕಿತ್ತು. ಅಕ್ರಮ ಕ್ರಷರ್ ಬಗ್ಗೆ ಮನವಿ ಮಾಡಿದ್ದರೂ ನಿಲ್ಲಿಸುವ ಪ್ರಯತ್ನ ನಡೆಸಿಲ್ಲ. ತಡೆಯಲು ಹೋದ ರೈತರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಆರೋಪಿಸಿದರು.ಕೆಲ್ಲಂಬಳ್ಳಿ-ಬದನೆಗುಪ್ಪೆ ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಅಲ್ಪ ಸ್ವಲ್ಪ ಪರಿಹಾರ ನೀಡಿದರೆ ಸಾಕಾಗುತ್ತಿಲ್ಲ. ಚಂಗಡಿ ಗ್ರಾಮದ ಪುನರ್ ವಸತಿಗೆ ಸರ್ಕಾರದ ಆದ್ಯತೆ ಮೇಲೆ ಪರಿಗಣಿಸಬೇಕು. ತರಕಾರಿ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು ಎಂದರು. ರೈತರ ಸಮಸ್ಯೆಗಳನ್ನು ಆಲಿಸಿದ ಉಸ್ತುವಾರಿ ಸಚಿವರು ತಮ್ಮ ಹಾಗೂ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಬಗೆಹರಿಸಿ, ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ಸಚಿವ ಸಂಪುಟದಲ್ಲಿ ತಿಳಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಎಸ್ಪಿ ಡಾ.ಕವಿತಾ, ಸಿಇಒ ಮೋನಾ ರೋತ್, ಸಿಎಫ್ ಹೀರಾಲಾಲ್, ಡಿಸಿಎಫ್ ಸಂತೋಷ್‌ಕುಮಾರ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.