ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆಯಾಗಲಿ

| Published : Sep 27 2024, 01:28 AM IST

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ದಲಿತ ವಿರೋಧಿ ಎಂಬಂತೆ ಬಿಜೆಪಿ ಹಾಗೂ ಜೆಡಿಎಸ್ ಬಿಂಬಿಸಲು ಹೊರಟಿವೆ.

ಬಳ್ಳಾರಿ: ಒಂದು ದೇಶ ಒಂದು ಚುನಾವಣೆ ವಿಷಯ ಚರ್ಚಿಸದೇ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ ಬಣ) ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಒಂದು ದೇಶ ಒಂದು ಚುನಾವಣೆಯಿಂದಾಗುವ ಸಾಧಕ-ಬಾಧಕಗಳ ಕುರಿತು ಸಮಗ್ರವಾಗಿ ಚರ್ಚೆಯಾಗಬೇಕು. ಬಳಿಕವಷ್ಟೇ ಜಾರಿಗೆ ಕ್ರಮ ವಹಿಸಬೇಕು. ಆದರೆ, ಕೇಂದ್ರ ಸರ್ಕಾರ ಏಕಾಏಕಿ ಜಾರಿಗೆ ಕ್ರಮ ವಹಿಸಿರುವುದು ಎಷ್ಟು ಸರಿ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ದಲಿತ ವಿರೋಧಿ ಎಂಬಂತೆ ಬಿಜೆಪಿ ಹಾಗೂ ಜೆಡಿಎಸ್ ಬಿಂಬಿಸಲು ಹೊರಟಿವೆ. ಮೀಸಲಾತಿ ವಿರೋಧಿಯಾಗಿ ಮಾತನಾಡಿದ್ದಾರೆ ಎಂದು ಕೋಮುವಾದಿ ಪಕ್ಷಗಳು ವಿನಾಕಾರಣ ಆರೋಪಿಸುತ್ತಿವೆ. ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸಿರುವ ಹಾಗೂ ಮೀಸಲಾತಿ ವಿರೋಧಿ ನೀತಿಯನ್ನೇ ಅನುಸರಿಸುತ್ತಿರುವ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಕೇಳಿದರು.

ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಪಾಲು ನೀಡುವುದೇ ಮೀಸಲಾತಿಯ ಉದ್ದೇಶವಾಗಿದೆ. ಮೀಸಲಾತಿಯ ಹೊರತಾಗಿಯೂ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಇನ್ನು ಅವಕಾಶಗಳ ಸಿಕ್ಕಿಲ್ಲ. ಸಾಮಾಜಿಕ ಅಸಮಾನತೆಯೂ ಕಡಿಮೆಯಾಗಿಲ್ಲ. ಶೋಷಿತ ಸಮುದಾಯಗಳು ಇನ್ನು ಸಮಾಜಿಕ ನ್ಯಾಯ ಸಿಗದೇ ಒದ್ದಾಡಲು ಬಿಜೆಪಿ ಆಡಳಿತವೇ ಪ್ರಮುಖ ಕಾರಣ ಎಂದು ಟೀಕಿಸಿದ ಪ್ರತಿಭಟನಾಕಾರರು, ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ಪ್ರಮುಖರಾದ ಎಚ್‌.ಬಿ.ಗಂಗಪ್ಪ, ಎಚ್.ಆಂಜಿನೇಯ, ಕೆ.ದೇವದಾಸು, ಮಲ್ಲಯ್ಯ, ಬಿ.ರಮೇಶ, ಟಿ.ಎರಿಸ್ವಾಮಿ, ಜಿ.ಪಂಪಾಪತಿ, ನಾಗೇಂದ್ರ, ಮಲ್ಲಪ್ಪ, ಎಚ್.ಶಂಕರ್, ದೊಡ್ಡಬಸಪ್ಪ, ಮಾರೆಪ್ಪ, ಜಗದೀಶ, ಪರಶುರಾಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಒಂದು ದೇಶ ಒಂದು ಚುನಾವಣೆ ವಿಷಯ ಚರ್ಚಿಸದೆ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬಳ್ಳಾರಿಯ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.