ಮಕ್ಕಳು ಸರ್ಕಾರಿ ಶಾಲೇಲಿ ಓದಬೇಕೆಂಬ ಕಾನೂನು ಬರಲಿ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

| Published : Dec 26 2024, 01:03 AM IST

ಮಕ್ಕಳು ಸರ್ಕಾರಿ ಶಾಲೇಲಿ ಓದಬೇಕೆಂಬ ಕಾನೂನು ಬರಲಿ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸವಲತ್ತು ಪಡೆದುಕೊಳ್ಳುವ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಮನೋಭಾವನೆ ಬಂದು ಬಿಟ್ಟರೆ ಸರ್ಕಾರಿ ಶಾಲೆಗಳು ತಾನಾಗಿಯೇ ಅಭಿವೃದ್ದಿ ಹೊಂದುತ್ತವೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ಚಾಮರಾಜನಗರದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರ್ಕಾರಿ ಸವಲತ್ತು ಪಡೆದುಕೊಳ್ಳುವ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಮನೋಭಾವನೆ ಬಂದು ಬಿಟ್ಟರೆ ಸರ್ಕಾರಿ ಶಾಲೆಗಳು ತಾನಾಗಿಯೇ ಅಭಿವೃದ್ದಿ ಹೊಂದುತ್ತವೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಡಾ.ರಾಜ್‌ಕುಮಾರ್ ಕಲಾಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಘಟಕದಿಂದ ನಡೆದ ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ ಹಾಗೂ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಯಾವುದೇ ಸೌಲಭ್ಯವಿಲ್ಲದ, ಶಿಕ್ಷಕರು ಸಹ ಇಲ್ಲದ ಸರ್ಕಾರಿ ಶಾಲೆಯಲ್ಲಿ ಓದಿದ ಬಡ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ ಎಂದರೆ ಆಕೆಯಲ್ಲಿದ್ದ ಓದುವ ಉತ್ಸಾಹ ಶ್ರದ್ಧೆ ಹಾಗೂ ಸಾಧಿಸಬೇಕೆಂಬ ಛಲ ಕಾರಣವಾಗಿದೆ. ೬೦೪ ಅಂಕ ಪಡೆದುಕೊಳ್ಳುವ ಜೊತೆಗೆ ಕನ್ನಡದಲ್ಲಿ ೧೨೫ ಅಂಕಗಳನ್ನು ಗಳಿಸುವ ಮೂಲಕ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಪ್ರತಿಭಾವಂತರು, ಬುದ್ದಿವಂತರು ಇದ್ದಾರೆಂಬ ಸಂದೇಶ ನೀಡಿದ್ದಾರೆ. ನಮ್ಮ ಮಕ್ಕಳು ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ರ್‍ಯಾಂಕ್ ಪಡೆದುಕೊಳ್ಳುತ್ತಾರೆ ಎಂಬ ಭಾವನೆ ಪೋಷಕರಲ್ಲಿದೆ. ಇದೊಂದು ಫ್ಯಾಷನ್ ಆಗಿದೆ. ಆ ರೀತಿ ಭಾವನೆಗಳು ಬರುವಂತೆಯು ಮಾಡಲಾಗುತ್ತದೆ. ಆದರೆ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳದ್ದಲ್ಲ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದರು. ಸರ್ಕಾರಿ ಶಾಲೆಗಳು ಮುಚ್ಚಿತ್ತಿವೆ ಎಂಬ ಮಾತುಗಳು ಕೇಳು ಬರುತ್ತಿದೆ. ಈ ಶಾಲೆಗಳನ್ನು ಅಭಿವೃದ್ಧಿಸಲು ಬೇರೆ ಏನು ಮಾಡಬೇಕಿಲ್ಲ. ಸರ್ಕಾರಿ ಸವಲತ್ತು ಪಡೆದುಕೊಳ್ಳುವವರು ಸರ್ಕಾರಿ ಶಾಲೆಗಳಲ್ಲಿಯೇ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಓದಿಸಬೇಕೆಂಬ ಕಾನೂನು ಬಂದರೆ, ಯಾರು ಸಹ ಅಭಿವೃದ್ದಿ ಮಾಡಬೇಕಿಲ್ಲ. ತಾನಾಗೇ ತಾನೆ ಎಲ್ಲ ಶಾಲೆಗಳು ಪ್ರಗತಿಯಾಗುತ್ತದೆ. ಇದನ್ನು ಮಾಡುವ ಇಚ್ಛಾಶಕ್ತಿ ಯಾರಿಗೂ ಇಲ್ಲ ಎಂದರು. ಬೆಂಗಳೂರಿನ ಪ್ರತಿಷ್ಠಿತ ಶಾಲೆಗೆ ಸೇರುವ ಮಕ್ಕಳು ಆ ಶಾಲೆಗೆ ಹೋಗುವುದಿಲ್ಲ. ಅವರ ಪಾಠ ಪ್ರವಚನ ಹೊರಗಡೆ ಟ್ಯೂಷನ್‌ಗಳಲ್ಲಿ ನಡೆಯುತ್ತಿದೆ. ಅವರು ರ್‍ಯಾಂಕ್ ಸಹ ಬರುತ್ತಾರೆ. ಮಾರನೇ ದಿನ ಇಂಥ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಗಳು ರ್‍ಯಾಂಕ್ ಗಳಿಸಿದ್ದಾರೆ ಎಂದು ದೊಡ್ಡ ಪೋಟೊಗಳು ಪ್ರಕಟಗೊಳ್ಳುತ್ತದೆ ಎಂದು ಸುತ್ತೂರುಶ್ರೀ ಹಾಸ್ಯಭರಿತವಾಗಿ ತಿಳಿಸಿದರು. ರಾಜೇಂದ್ರಶ್ರೀಗಳಿಗೆ ಚಾಮರಾಜನಗರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಆಸಕ್ತಿ ಇತ್ತು. ಹೀಗಾಗಿ ಮೈಸೂರು ಹೊರತು ಪಡಿಸಿ ಚಾ.ನಗರ ಜಿಲ್ಲೆಯ ಭಾಗಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಈ ಭಾಗ ಬಹುತೇಕ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದರು. ಇದರಲ್ಲಿ ಪ್ರಮುಖವಾಗಿ ದುಗ್ಗಹಟ್ಟಿ ವೀರಭದ್ರಪ್ಪ ಅವರು. ಶ್ರೀಮಠದ ಬಗ್ಗೆ ಅವರಿಗೂ ವಿಶೇಷ ಕಾಳಜಿ ಇತ್ತು. ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಶ್ರೀರಾಜೇಂದ್ರ ಸೇವಾ ಪ್ರಶಸ್ತಿ ಅವರಿಗೆ ನೀಡುತ್ತಿರುವುದು ಸಂತಸವಾಗಿದೆ ಎಂದರು.ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ವಚನ ಸಾಹಿತ್ಯ ಹಾಗೂ ಕನ್ನಡ ಸೇವೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಇಂಥ ಸಂಸ್ಥೆಯು ಶ್ರೀ ರಾಜೇಂದ್ರಸ್ವಾಮಿಗಳ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂತು ಎಂಬುದು ಹೆಮ್ಮೆ. ಶ್ರೀಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡುವ ಜೊತೆಗೆ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಪರಿಕಲ್ಪನೆಯೊಂದಿಗೆ ಪರಿಷತ್ತು ಸ್ಥಾಪನೆ ಮಾಡಿದರು. ಅವರ ಉದ್ದೇಶವನ್ನು ಕೆ.ಸಿ. ಶಿವಪ್ಪ ಅವರು ದತ್ತಿ ಸ್ಥಾಪನೆ ಮಾಡಿ, ಸೇವಾ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಇನ್ನು ಎತ್ತರಕ್ಕೆ ಬೆಳೆಸುತ್ತಿದ್ದಾರೆ.ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ ಸ್ವೀಕರಿಸಿದ ಸಮಾಜ ಸೇವಕ ದುಗ್ಗಟ್ಟಿ ಪಿ.ವೀರಭದ್ರಪ್ಪ ಮಾತನಾಡಿ, ಕಳೆದ ೭೦ ವರ್ಷಗಳಿಂದ ಸಮಾಜ ಸೇವೆ ಹಾಗೂ ಶ್ರೀಮಠದ ಸೇವೆಯಲ್ಲಿ ತೊಡಗಿಕೊಂಡಿರುವ ನನಗೆ ಕೆ.ಸಿ.ಶಿವಪ್ಪ ಅವರು ರಾಜೇಂದ್ರಶ್ರೀಗಳ ಸೇವಾ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಪ್ರಶಸ್ತಿ ಜೊತೆಗೆ ನೀಡಿರುವ ೨೫ ಸಾವಿರ ನಗದು ಜೊತೆಗೆ ನಾನು ೨೫ ಸಾವಿರ ರು.ಗಳನ್ನು ಹಾಕಿ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳಿಗೆ ಸದ್ಬಳಕೆ ಮಾಡಿಕೊಳ್ಳಲು ನೀಡುತ್ತಿರುವುದಾಗಿ ಘೋಷಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಕೆ.ಸಿ. ಶಿವಪ್ಪ ಅವರು ದತ್ತಿ ನೀಡಿ, ಹಳೇ ಬೇರು ಹೊಸ ಚಿಗರುಗಳನ್ನು ಸನ್ಮಾನಿಸುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡುತ್ತಿದ್ದಾರೆ. ದುಗ್ಗಟ್ಟಿ ವೀರಭದ್ರಪ್ಪ ಅವರು ಹಳೇ ಬೇರಿನ ಅನುಭವಗಳಾದರೆ, ಮಹೇಶ್ವರಿ ಹೊಸ ಚಿಗುರು, ಇಂಥ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮ ಅರ್ಥಪೂರ್ಣ ಎಂದರು. ಶ್ರೀ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಶಿಂಡನಪುರ ಮಹೇಶ್ವರಿ ಅವರಿಗೆ ನೀಡಿ ಅಭಿನಂದಿಸಲಾಯಿತು. ಪಡಗೂರು ಅಡವಿ ಮಠಾಧ್ಯಕ್ಷ ಹಾಗೂ ಶಸಾಪ ಜಿಲ್ಲಾ ಗೌರವಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ದತ್ತಿ ಪ್ರಯೋಜಕರಾದ ಸಾಹಿತಿ ಕೆ.ಸಿ.ಶಿವಪ್ಪ, ಜಿಲ್ಲಾ ಶಸಾಪ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ದುಗ್ಗಹಟ್ಟಿ, ಪ್ರ.ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ಕಾರ್ಯದರ್ಶಿ ಬಿ.ಎಸ್.ವಿನಯ್, ನಾಗರಾಜು, ನಗರ ಘಟಕದ ಅಧ್ಯಕ್ಷ ಎಂ. ಸುಂದರ್ ತಾಲೂಕು ಅಧ್ಯಕ್ಷ ಆರ್.ಎಸ್.ಲಿಂಗರಾಜು, ಕಾರ್ಯದರ್ಶಿ ವೀರಭದ್ರಸ್ವಾಮಿ, ನಾಗರಾಜು, ನಾಗಮಲ್ಲೇಶ್, ದೊಡ್ಡರಾಯಪೇಟೆ ನಾಗರಾಜು ಕದಳಿ ವೇದಿಕೆಯ ಅಧ್ಯಕ್ಷೆ ವಸಂತಮ್ಮ ಇದ್ದರು.