ಮೌಲ್ಯಗಳ ಪುನರುತ್ಥಾನ ಆಗಲಿ

| Published : Nov 13 2024, 12:09 AM IST

ಸಾರಾಂಶ

ಜಗತ್ತಿನಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರವಾಹಿಯನ್ನು ಅತಿಹೆಚ್ಚು ಜನ ನೋಡಿರುವ ದಾಖಲೆಯಿದೆ

ಗದಗ: ರಾಮಾಯಣ, ಮಹಾಭಾರತದಲ್ಲಿನ ಮೌಲ್ಯಗಳ ಪುನರುತ್ಥಾನಕ್ಕೆ ಅಧ್ಯಾತ್ಮಿಕ ಲೋಕದಲ್ಲಿ ದಿಟ್ಟತನ ಬರಬೇಕಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಶ್ರೀಸದಾಶಿವಾನಂದ ಗಾರ್ಡನ್‌ನಲ್ಲಿ ಕುಮಾರವ್ಯಾಸ ಪ್ರವಚನ ಸಂಚಾಲನಾ ಸಮಿತಿ ಹಮ್ಮಿಕೊಂಡ ಶ್ರೀಮದ್ ಭಗವದ್ಗೀತಾ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗತ್ತಿನಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರವಾಹಿಯನ್ನು ಅತಿಹೆಚ್ಚು ಜನ ನೋಡಿರುವ ದಾಖಲೆಯಿದೆ. ಜಾತಿ, ಧರ್ಮ, ಮತ-ಪಂಥ ಮರೆತು ಎಲ್ಲರೂ ಅವುಗಳನ್ನು ನೋಡಿದ್ದಾರೆ. ಆದರೆ ಅದರ ಪರಿಣಾಮ ಅಳತೆ ಮಾಡಿದಾಗ ನಿರಾಸೆ ಮೂಡಿಸುತ್ತದೆ. ಸದೃಢ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ರಾಮಾಯಣ, ಮಹಾಭಾರತದ ಮಾತು ಗಾಳಿಗೆ ತೂರಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಭಾರತದಲ್ಲಿ ನಡೆಯುವಷ್ಟು ಧಾರ್ಮಿಕ ಕಾರ್ಯಕ್ರಮಗಳು ಬೇರೆ ಯಾವುದೇ ದೇಶದಲ್ಲಿ ನಡೆಯುವುದಿಲ್ಲ. ಆದರೂ ಭಾರತೀಯರ ಬದುಕಿನಲ್ಲಿ ಪರಿಣಾಮ ಬೀರಿಲ್ಲ. ಆದರೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಗದಗ ನೆಲದಲ್ಲಿ ಪಾವಗಡ ಪ್ರಕಾಶರಾವ್ ಪ್ರವಚನ ಜನರ ಬದುಕಿನಲ್ಲಿ ಬದಲಾವಣೆ ತರಲಿ. ಮೌಲ್ಯಗಳ ಪುನರುತ್ಥಾನಗೊಂಡು ಜನರ ಜ್ಞಾನ ಕ್ಷಿತಿಜ ವಿಸ್ತರಿಸಲಿ ಎಂದರು.

ಡಾ.ಪಾವಗಡ ಪ್ರಕಾಶರಾವ್, ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಅಭಿನವ ಶಿವಾನಂದ ಸ್ವಾಮೀಜಿ, ಪುನೀತ್ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಡಾ. ಎಸ್.ಬಿ.ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಿ.ಆರ್. ಪಾಟೀಲ, ನಿವೃತ್ತ ನ್ಯಾಯಾಧೀಶ ಎಸ್.ಕೆ. ಪಲ್ಲೇದ, ಗುರುರಾಜ ಬಳಗಾನೂರ, ಜೆ.ಕೆ. ಜಮಾದಾರ ಉಪಸ್ಥಿತರಿದ್ದರು. ಡಾ. ಕಲ್ಲೇಶ ಮೂರಶಿಳ್ಳಿನ ನಿರ್ವಹಿಸಿದರು.