ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಉತ್ತಮ ಪ್ರಭಾವ ಬೀರುವ ಶಿಕ್ಷಕರಿಂದ ಕಲಿತ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಹೊಂದುತ್ತಾರೆ ಎಂದು ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆಯ ಔಷಧ ಪರಿವೀಕ್ಷಕರಾದ ನಂದಿನಿ ಹೇಳಿದರು.ಪಟ್ಟಣದ ವಿವೇಕಾನಂದ ಲಯನ್ಸ್ ಕನ್ನಡ ಮತ್ತು ಆಂಗ್ಲ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಗುರಿ ಇಟ್ಟುಕೊಳ್ಳಬೇಕು. ಆ ಗುರಿ ಸಾಧನೆಗೆ ಛಲ ಹೊಂದಿರಬೇಕು. ತರಗತಿಯಲ್ಲಿ ಏಕಾಗ್ರತೆ ಕಾಯ್ದುಕೊಂಡು ಶಿಕ್ಷಕರ ಪಾಠ ಆಲಿಸಬೇಕು. ನಮ್ಮ ನಡೆ, ನುಡಿ ಎಲ್ಲವೂ ವಿದ್ಯಾರ್ಥಿಗಳ ಬೆಳವಣಿಗೆಗೆ ಪರಿಗಣನೆ ಆಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮಿಸಿದರೆ ಉತ್ತಮ ಜ್ಞಾನದೊಂದಿಗೆ ಅಂಕಗಳಿಸಿ ಸಮಾಜದಲ್ಲಿ ಉನ್ನತ ಸ್ಥಾನ ಮಾನಗಳಿಸಲು ಸಾಧ್ಯ ಆಗುತ್ತದೆ. ಓದಿಗೆ ಯಾವುದೇ ಅಡ್ಡಿ ಆತಂಕಗಳು ಇರುವುದಿಲ್ಲ. ಅದನ್ನು ನಾವು ಸೃಷ್ಟಿಸಿಕೊಳ್ಳಬಾರದು. ಪೋಷಕರು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತಮ್ಮ ಜೀವನ ತ್ಯಾಗ ಮಾಡುತ್ತಾರೆ. ಅದಕ್ಕೆ ಸಾರ್ಥಕವಾಗಿ ನಾವು ಉತ್ತಮ ಫಲಿತಾಂಶ ನೀಡಬೇಕು ಎಂದರು.
ವಿವೇಕಾನಂದ ಲಯನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್.ರಂಗನಾಥಯ್ಯ, ಲಯನ್ಸ್ ವಿದ್ಯಾ ಸಂಸ್ಥೆಯ ಖಜಾಂಚಿ ಡಾ.ಯು.ವಿಜಯಶೆಟ್ಟಿ, ಕಾರ್ಯದರ್ಶಿ ದ್ಯಾಮಪ್ಪ ಮಾತನಾಡಿದರು. ಈ ಸಂದರ್ಭ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.ಲಯನ್ಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ.ಆರ್.ಸೀತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎನ್.ರುದ್ರೇಶ್, ಮಾಜಿ ಅಧ್ಯಕ್ಷರಾದ ಎಚ್.ಸಿ.ರಾಜೇಶ್, ಮಲ್ಲೇಶಪ್ಪ, ಪಿ.ರುದ್ರೇಶನ್, ಪ್ರೊ.ಶೇಖರಪ್ಪ, ಕೃಷ್ಣ, ಜಿ.ಎನ್.ಸತೀಶ್, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ವಿದ್ಯಾರ್ಥಿನಿ ಮಂದಾರ ಸಂಗಡಿಗರು ಪ್ರಾರ್ಥಿಸಿ, ಮುಖ್ಯಶಿಕ್ಷಕ ಎಚ್.ಸುರೇಶ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರತ್ನಾ ಹಾಗೂ ಕಾವ್ಯ ನಿರೂಪಿಸಿ, ಶಿಕ್ಷಕಿ ಎಸ್.ಅನಿತಾ ವಂದಿಸಿದರು.