ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಇರಲಿ: ಸಚಿವ ದಿನೇಶ ಗುಂಡೂರಾವ್‌

| Published : Apr 25 2025, 11:54 PM IST

ಸಾರಾಂಶ

ಆರೋಗ್ಯ ಕ್ಷೇತ್ರ ತುಂಬ ಸಂಕೀರ್ಣವಾದ ಕ್ಷೇತ್ರ. ಔಷಧಿ ಪೂರೈಕೆ, ಸಿಬ್ಬಂದಿ ನಿರ್ವಹಣೆ, ಸೇವೆ ಕಾರ್ಯ ಮುಂತಾಗಿ ಹಲವು ವೈವಿಧ್ಯ ಕಾರ್ಯಗಳನ್ನು ಒಳಗೊಂಡದ್ದು.

ಸಿದ್ದಾಪುರ: ಆರೋಗ್ಯ ಕ್ಷೇತ್ರ ತುಂಬ ಸಂಕೀರ್ಣವಾದ ಕ್ಷೇತ್ರ. ಔಷಧಿ ಪೂರೈಕೆ, ಸಿಬ್ಬಂದಿ ನಿರ್ವಹಣೆ, ಸೇವೆ ಕಾರ್ಯ ಮುಂತಾಗಿ ಹಲವು ವೈವಿಧ್ಯ ಕಾರ್ಯಗಳನ್ನು ಒಳಗೊಂಡದ್ದು. ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಲ್ಲಿ ಸೇವಾ ಮನೋಭಾವ ಇದ್ದರೆ ಉತ್ತಮ ಸೇವೆ ನೀಡಲು ಸಾಧ್ಯ. ತಾವು ಕೆಲಸ ಮಾಡುವ ಹುದ್ದೆಗೆ ನ್ಯಾಯ ಒದಗಿಸುವ ಪ್ರವೃತ್ತಿ ಕುಂಠಿತವಾಗಬಾರದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿಯ ಧನ್ವಂತರಿ ಆಯುರ್ವೇದ ಮೆಡಿಕಲ್ ಕಾಲೇಜ್, ಹಾಸ್ಪಿಟಲ್, ರಿಸರ್ಚ್‌ ಸೆಂಟರ್‌ನ ರಜತ ಮಹೋತ್ಸವ ಮತ್ತು ನೂತನ ಆಸ್ಪತ್ರೆ ಹಾಗೂ ಸಿದ್ದಾಪುರ ಮೆಡಿಕಲ್ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಇಂಥ ಸಂಸ್ಥೆಗಳನ್ನು ಕಟ್ಟುವುದು ಅಂದರೆ ಸಮಾಜವನ್ನು ಕಟ್ಟುವುದರ ಜೊತೆಗೆ ದೇಶದ ಬೆಳವಣಿಗೆಗೆ ಕಾರಣವಾದಂತೆ. ದೊಡ್ಮನೆ ಗಣೇಶ ಹೆಗಡೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೂರದೃಷ್ಟಿಯಿಂದ ಕಟ್ಟಿದ ಸಂಸ್ಥೆ ಇದು. ಶಿಕ್ಷಣ,ಸಂಶೋಧನೆ, ಉದ್ಯಮ ಮುಂತಾದವುಗಳಲ್ಲಿ ಇಂಥ ಸಂಸ್ಥೆಗಳನ್ನು ಕಟ್ಟಿರುವದಕ್ಕೆ ಭಾರತ ವಿಶ್ವದಲ್ಲೇ ಮಾದರಿಯಾಗಿದೆ ಎಂದರು.

ರೋಗ ಬಂದ ನಂತರ ಗಮನಿಸುವುದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದು ಮುಖ್ಯ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿಯಿಂದ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಬಾಲ್ಯದಲ್ಲೇ ಬಿಪಿ, ಶುಗರ್ ನಂಥ ಕಾಯಿಲೆ ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ನಿಯಂತ್ರಿಸಲು ಆಯುಷ್ ಚಿಕಿತ್ಸೆ ಅತ್ಯಗತ್ಯವಾದದ್ದು. ಪಾರಂಪರಿಕ ಚಿಕಿತ್ಸಾ ಪದ್ಧತಿ ಅಳವಡಿಸಿಕೊಳ್ಳುವದು ಮುಖ್ಯ ಎಂದರು.

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಗಣೇಶ ಹೆಗಡೆ, ರಾಮಕೃಷ್ಣ ಹೆಗಡೆಯವರ ದೂರದೃಷ್ಟಿಯ ಕನಸು ನನಸಾಗಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವದರ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡುವ ಕಾರ್ಯ ಈ ಸಂಸ್ಥೆಯಿಂದ ಆಗುತ್ತಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಹಿರಿಯರ ಶ್ರಮ, ಸಾಧನೆಯಿಂದ ಇಂಥ ಜನೋಪಯೋಗಿ ಸಂಸ್ಥೆ ಉತ್ತಮವಾಗಿ ಬೆಳೆದಿದೆ. ವೈದ್ಯಕೀಯ ಶಿಕ್ಷಣ ಪಡೆದವರು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಮನೋಭಾವ ಹೊಂದಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ನೀಟ್ ಪರೀಕ್ಷೆಯಲ್ಲಿ ಸರಳೀಕರಣ ತರಬೇಕು. ಎಂಬಿಬಿಎಸ್ ಪದವಿ ಶಿಕ್ಷಣದ ಶುಲ್ಕ ಕಡಿಮೆ ಮಾಡಿದರೆ ಗ್ರಾಮೀಣ ವಿದ್ಯಾರ್ಥಿಗಳಿಗೂ ಅವಕಾಶ ದೊರೆಯುತ್ತದೆ. ಇಲ್ಲವಾದರೆ ಬಂಡವಾಳಶಾಹಿ ಮಕ್ಕಳು ಮಾತ್ರ ಅದನ್ನು ಪಡೆಯುತ್ತಾರೆ ಎಂದರು.

ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯೆ ಡಾ.ರೂಪಾ ಭಟ್ ಸ್ವಾಗತಿಸಿದರು. ರಜತ ಸಂಭ್ರಮದ ಕುರಿತು ಜಿ.ಕೆ.ಹೆಗಡೆ ಗೋಳಗೋಡ ಮಾತನಾಡಿದರು.

ಆಯುರ್ವೇದ ಕಾಲೇಜಿನ ವಾಸ್ತುವಿನ್ಯಾಸ ಮಾಡಿದ್ದ ಆರ್.ಕೆ.ಹೆಗಡೆ ಕೋಡ್ಸರ ಅವರನ್ನು ಸಮಿತಿಯ ಛರ‍್ಮನ್ ವಿನಾಯಕರಾವ್ ಜಿ.ಹೆಗಡೆ ದೊಡ್ಮನೆ ಸನ್ಮಾನಿಸಿದರು. ಡಾ.ವೀಣಾ, ಪ್ರೊ.ರಾಘವೇಂದ್ರ ಉಪಸ್ಥಿತರಿದ್ದರು.