ಸಾರಾಂಶ
ಶಿವಮೊಗ್ಗ: ನಾನಾ ಕಾರಣದಿಂದ ಕಾಂಗ್ರೆಸ್ ಪಕ್ಷದಿಂದ ಒಬಿಸಿ ಮತಗಳು ದೂರ ಉಳಿದಿವೆ. ಅವುಗಳನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಪ್ರತಿಯೊಬ್ಬ ಕಾರ್ಯಕರ್ತರಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್‌ನ ಒಬಿಸಿಯ ಶಕ್ತಿಯನ್ನು ನಾವು ಅರ್ಥಮಾಡಿಕೊಂಡಿಲ್ಲ. ಇದಕ್ಕೆ ಸಂಘಟನೆ ಬಹುಮುಖ್ಯ. ಮುಂದಿನ ದಿನದಲ್ಲಿ ಒಬಿಸಿ ಪರವಾಗಿ ನಾನು ನಿಲ್ಲುತ್ತೇನೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಬೇರೆ ಸಮಾಜದ ವ್ಯಕ್ತಿಯಾದರೂ ಕೂಡ ರಾಹುಲ್ ಗಾಂಧಿ ಅವರು ಒಬಿಸಿ ಅವರ ಪರ ಧ್ವನಿ ಎತ್ತಿದ್ದಾರೆ. ನಾವು ಕೂಡ ಅಷ್ಟೇ ಜವಾಬ್ದಾರಿಯನ್ನು ತೆಗೆದುಕೊಂಡು ಒಬಿಸಿ ಮತಗಳನ್ನು ಸೆಳೆಯುವ ಪ್ರಯತ್ನಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಬಂಗಾರಪ್ಪ, ದೇವರಾಜ್ ಅರಸು, ವೀರಪ್ಪಮೋಯ್ಲಿ ಅವರು ನೀಡಿದ ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗದ ಜನರಿಗೆ ಮುಟ್ಟಿಸಿ ಅವರನ್ನು ಪಕ್ಷಕ್ಕೆ ಕರೆತರುವ ಕೆಲಸ ಆಗಬೇಕಿದೆ. ಪಕ್ಷದ ಕಾರ್ಯಕರ್ತನೂ ತಮ್ಮ ಜವಬ್ದಾರಿಯನ್ನು ಅರಿತು ಕಾಂಗ್ರೆಸ್ ಪಕ್ಷದ ಧ್ವನಿಯಾಗಿರಬೇಕು ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ವಕ್ತಾರ ಆಯನೂರು ಸದಸ್ಯ ಮಾತನಾಡಿ, ಪಕ್ಷದೊಳಗೆ ನೀಡುವ ಜವಾಬ್ದಾರಿಯನ್ನು ಅಧಿಕಾರ ಎಂದು ಭ್ರಮಿಸಿದರೆ ಅವತ್ತು ನಾವು ಕಾರ್ಯಕರ್ತರಿಂದ ದೂರವಾಗುತ್ತೇವೆ. ಅಧಿಕಾರ ಸಿಕ್ಕಿದೆ ಎಂದು ಭಾವಿಸುವುದಕ್ಕಿಂತ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಮೂಲಕ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲ ಪಡಿಸಲು ಸಿಕ್ಕ ಅವಕಾಶ ಎಂದು ಭಾವಿಸಬೇಕು ಎಂದು ಸಲಹೆ ನೀಡಿದರು.
ಮುಂದೆ ಜಿಲ್ಲೆಯಲ್ಲಿ ಸವಾಲಿನ ದಿನಗಳು ಕಣ್ಣಮುಂದೆ ಇವೆ. ಜಿಪಂ, ತಾಪಂ ಚುನಾವಣೆಗಳು ನಮ್ಮ ಮುಂದಿವೆ. ಜಿಲ್ಲೆಯ ಬಹುಸಂಖ್ಯಾತ ಹಿಂದುಳಿದ ವರ್ಗದ ಮತಗಳು ಪಕ್ಷಕ್ಕೆ ಬರುವಂತೆ ಮಾಡಬೇಕು. ಇದಕ್ಕೆ ಎಲ್ಲ ಕಾರ್ಯಕರ್ತರು ಸಾಕ್ಷಿಯಾಗಬೇಕು. ನಮ್ಮನ್ನು ನಾವೇ ಪ್ರಶಂಸಿಕೊಂಡು ಕಾಲಕಳೆಯುವ ಒತ್ತು ಇದಲ್ಲ. ಸಿದ್ದರಾಮಯ್ಯ ಅಂತ ಹಿಂದುಳಿದ ನಾಯಕರು ಇದ್ದರೂ ಹಿಂದುಳಿತ ವರ್ಗದವರನ್ನು ನಮ್ಮ ಪಕ್ಷಕ್ಕೆ ಕರೆದಿದ್ದರೆ ಅದು ನಮ್ಮಲ್ಲಿನ ದೋಷ. ನಮ್ಮೊಟ್ಟಿಗೆ ಅವನ್ನು ಕರೆತರುವ ವಿಶೇಷ ಪ್ರಯತ್ನವಾಗಬೇಕು ಎಂದರು.ದಿ.ಬಂಗಾರಪ್ಪ ಅವರನ್ನು ಹಿಂದುಳಿದ ವರ್ಗದ ಚಾಂಪಿಯನ್ ಎಂದು ಕರೆಯುತ್ತಿದ್ದೇವೆ. ಆದರೆ, ಅತಿ ಹೆಚ್ಚು ಸಂಖ್ಯೆಯನ್ನು ಇಟ್ಟುಕೊಂಡು ಬಂಗಾರಪ್ಪ ಅವರ ಮಗಳನ್ನು ಚುನಾವಣೆಯಲ್ಲಿ ಸೋಲಿಸಿದ್ದೇವೆ ಎಂದರೆ ಇದು ಅಭ್ಯರ್ಥಿಯ ಸೋಲಲ್ಲ. ಬದಲಿಗೆ ಸ್ಥಳೀಯ ಕಾರ್ಯಕರ್ತರ ವೈಫಲ್ಯ. ಹಿಂದುಳಿದ ವರ್ಗದ ಮತದಾರರ ಮನಸ್ಸಿನಿಂದ ನಾವು ದೂರಾಗಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಮಾತನಾಡಿ, ಪಕ್ಷದಲ್ಲಿ ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವ ಅಗತ್ಯವಿದೆ. ರಾಹುಲ್ ಗಾಂಧಿಯವರು ಬಿಜೆಪಿಯ ಮತ ಗಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸುವಂತೆ ಕೆಲಸ ಕಾರ್ಯಕರ್ತರಿಂದ ಆಗಬೇಕು. ಪಕ್ಷದ ಸಂಘಟನೆಯ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಶೇ.65ಕ್ಕಿಂತ ಹೆಚ್ಚು ಮತಗಳಿರುವ ಹಿಂದುಳಿದ ವರ್ಗದವರ ವಿಶ್ವಾಸಗಳಿಸಬೇಕಿದೆ. ಹಿಂದುಳಿದ ವರ್ಗದ ಸಣ್ಣ, ಸಣ್ಣ ಸಮಾಜದವರ ವಿಶ್ವಾಸಪಡೆಯುವ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕಿದೆ ಎಂದು ಕರೆ ನೀಡಿದರು.ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ನೂತನ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಅವರು ಅಧಿಕಾರ ಸ್ವೀಕಾರಿಸಿದರು. ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್ ಮತ್ತಿತರರಿದ್ದರು.