ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸ್ವಚ್ಛತಾ ವಾಹನಗಳಿಗೆ ಹಸ್ತಾಂತರಿಸಬೇಕು.
ಕುಮಟಾ: ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಪೌರಕಾರ್ಮಿಕರ ಶ್ರಮದ ಜತೆಗೆ ಸಮರ್ಪಕ ಸಹಯೋಗ ನೀಡಿದರೆ ಮಾತ್ರ ಇಡೀ ದೇಶಾದ್ಯಂತ ನಡೆಯುತ್ತಿರುವ ಸ್ವಚ್ಛತಾ ಹೀ ಸೇವಾ ಅಭಿಯಾನ ಯಶಸ್ವಿಯಾಗುತ್ತದೆ. ಪಟ್ಟಣದ ಅಭಿವೃದ್ಧಿ ಮಾರ್ಗಕ್ಕೆ ಪೌರಕಾರ್ಮಿಕರೇ ಬುನಾದಿಯಾಗಿದ್ದಾರೆ ಎಂದು ತಾಪಂ ಇಒ ಆರ್.ಎಲ್. ಭಟ್ ಹೇಳಿದರು.
ಇಲ್ಲಿನ ಪುರಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸ್ವಚ್ಛತಾ ವಾಹನಗಳಿಗೆ ಹಸ್ತಾಂತರಿಸಬೇಕು. ಸಾರ್ವಜನಿಕರು ಜಾಗೃತರಾಗಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ನಿಯಮಾನುಸಾರ ವಿಲೇವಾರಿ ಮಾಡುವ ಮೂಲಕ ಪೌರಕಾರ್ಮಿಕರ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು.
ಸಿಪಿಐ ಯೋಗೇಶ ಕೆ.ಎಂ. ಮಾತನಾಡಿ, ಪೌರಕಾರ್ಮಿಕರದ್ದು ತುಂಬಾ ಕಷ್ಟಕರ ಕಾರ್ಯ. ಪೌರಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗಬಾರದು. ಉತ್ತಮ ಆರೋಗ್ಯವನ್ನು ಹೊಂದಿದಾಗ ಮಾತ್ರ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಿ ಅವರು ಸಹ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರುವಂತೆ ಪ್ರೋತ್ಸಾಹ ನೀಡಬೇಕು ಎಂದರು.ಚರ್ಮರೋಗ ತಜ್ಞ ಡಾ. ಶಿವಾನಂದ ಹೆಗಡೆ ಮಾತನಾಡಿ, ಸ್ವಚ್ಛತೆ ಎಲ್ಲಿ ಇರುತ್ತದೆಯೋ ಅಲ್ಲಿ ಆರೋಗ್ಯ ಇರುತ್ತದೆ. ಪೌರಕಾರ್ಮಿಕರನ್ನು ಆರೋಗ್ಯ ರಕ್ಷಕರು ಎನ್ನಬಹುದು. ಅವರು ಪಟ್ಟಣಗಳ ಸ್ವಚ್ಛತೆಯ ಜತೆಗೆ ಅವರ ವೈಯಕ್ತಿಕ ಜೀವನದೆಡೆಗೂ ಕಾಳಜಿ ವಹಿಸಬೇಕು. ಅವರ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಂಡು ಕಾರ್ಯನಿರ್ವಹಿಸಲಿ ಎಂದರು.
ಪುರಸಭಾ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜ ಇಟ್ನಾಳ, ಆಯುಷ್ ವೈದ್ಯಾಧಿಕಾರಿ ಡಾ. ಗಜಾನನ ಭಾಗ್ವತ, ಮಾರುತಿ ಗಾವಡಿ ಇತರರು ಇದ್ದರು.