ಇಂದು ಮೊಬೈಲ್ ಮತ್ತು ಟಿವಿ ಪ್ರಭಾವದಿಂದ ರಂಗಭೂಮಿಯ ನಾಟಕಗಳು ಮರೆಯಾಗುತ್ತಿದ್ದು, ನಾಟಕ ರಚನೆಯ ಕೆಲಸವೂ ಕಡಿಮೆಯಾಗಿದೆ.
ಮುಂಡರಗಿ: ರಂಗಭೂಮಿಯನ್ನು ಹಾಗೂ ರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕು. ತಮ್ಮ ಅನೇಕ ಸಂಕಷ್ಟಗಳ ನಡುವೆಯೂ ಗದುಗಿನ ನಾಟಕಕಾರ ಎಚ್.ಎನ್. ಹೂಗಾರ ತಮ್ಮ ನಾಟಕಗಳ ಮೂಲಕ ಸಮಾಜದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು ಎಂದು ಎಂದು ವರ್ತಕ ಕೊಟ್ರೇಶ ಅಂಗಡಿ ತಿಳಿಸಿದರು.
ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಂಜೆ ಜರುಗಿದ ನಾಟಕಕಾರ ಎಚ್.ಎನ್. ಹೂಗಾರ ಅವರ ಕೃತಿ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಚ್.ಎನ್. ಹೂಗಾರ ಅವರ ಬಗ್ಗೆ ಇನ್ನಷ್ಟು ತಿಳಿಸುವ ಕೆಲಸವಾಗಬೇಕು. ಕಸಾಪ ಇಂತಹ ವಿನೂತನ ಕಾರ್ಯ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇಂದು ಮೊಬೈಲ್ ಮತ್ತು ಟಿವಿ ಪ್ರಭಾವದಿಂದ ರಂಗಭೂಮಿಯ ನಾಟಕಗಳು ಮರೆಯಾಗುತ್ತಿದ್ದು, ನಾಟಕ ರಚನೆಯ ಕೆಲಸವೂ ಕಡಿಮೆಯಾಗಿದೆ ಎಂದರು.
ಸಾಮಾಜಿಕ ಮೌಲ್ಯಗಳನ್ನು ತಿಳಿಸಿ ಕೊಡುವ ನಾಟಕಗಳನ್ನು ಪ್ರೇಕ್ಷಕರು ಇನ್ನು ಪ್ರೋತ್ಸಾಹಿಸುವ ಕೆಲಸ ನಿಂತಿಲ್ಲ. ಹೀಗಾಗಿ ಕಲಾತ್ಮಕ ನಾಟಕಗಳು ಹೆಚ್ಚು ಬರಲಿ, ಯಾವುದೇ ನಾಟಕ ತಂಡಗಳು ಮುಂಡರಗಿಗೆ ಬಂದರೆ ಅವರಿಗೆ ನೆರವು ನೀಡುವಂತಹ ಪ್ರೇಕ್ಷಕರು ಪಟ್ಟಣದಲ್ಲಿದ್ದಾರೆ ಎಂದರು.ನಾಟಕಕಾರ ಎಚ್.ಎನ್. ಹೂಗಾರ ಕುರಿತು ಎಸ್.ಎಚ್. ಮಹೇಶ ಮಾತನಾಡಿ, ಎಚ್.ಎನ್. ಹೂಗಾರ ಅವರು 72ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅದರಲ್ಲಿ ಪಟ್ಟಣಕ್ಕೆ ಬಂದ ಪತ್ನಿಯರು ಸೇರಿದಂತೆ ಹಲವು ನಾಟಕಗಳು ಚಲನಚಿತ್ರಗಳಾಗಿವೆ. ಮೂಲ ಗದಗ-ಬೆಟಗೇರಿಯವರಾಗಿದ್ದ ಇವರು, ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದಲ್ಲಿಯೂ ನೆಲೆಸಿದ್ದರು ಎಂದರು.
ಈ ವೇಳೆ ಪಿಎಚ್‌ಡಿ ಪದವಿ ಪಡೆದ ಡಾ. ತೌಶಿಫ್ ಅಳವಂಡಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು.ಮಲ್ಲಿಕಾರ್ಜುನ ಹೂಗಾರ, ಎಸ್.ಬಿ. ಹಿರೇಮಠ, ಕಸಾಪ ಕಾರ್ಯಕಾರಿಣಿ ಸದಸ್ಯರಾದ ಶಂಕರ ಕುಕನೂರ, ಸಿ.ಕೆ. ಗಣಪ್ಪನವರ, ಐ.ಜೆ. ಮುಲ್ಲಾ, ಸಿ.ಎಸ್. ಅರಸನಾಳ, ಎ.ಎಸ್. ಗೋಡಖಿಂಡಿ, ವಿ.ಎಫ್. ಗುಡದಪ್ಪನವರ, ಎಸ್.ಬಿ.ಕೆ. ಗೌಡರ ಉಪಸ್ಥಿತರಿದ್ದರು.ಅಕ್ಕಮ್ಮ ಕೊಟ್ಟೂರಶೆಟ್ಟರ ಸ್ವಾಗತಿಸಿದರು. ಪ್ರೊ. ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು.