ಎಲ್ಲ ಜಾತಿ, ಧರ್ಮಗಳಲ್ಲೂ ಸಮಾನತೆ ಮೂಡಲಿ: ಸಚಿವ ಮಧು ಬಂಗಾರಪ್ಪ

| Published : Sep 02 2024, 02:10 AM IST

ಎಲ್ಲ ಜಾತಿ, ಧರ್ಮಗಳಲ್ಲೂ ಸಮಾನತೆ ಮೂಡಲಿ: ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಆನವಟ್ಟಿಯಲ್ಲಿ ಶರಣ ನೂಲಿ ಚಂದಯ್ಯ ಅವರ 917ನೇ ಜಯಂತ್ಯೋತ್ಸವಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ಎಲ್ಲಾ ಜಾತಿ, ಧರ್ಮದವರಲ್ಲೂ ಸಮಾನತೆಯ ಭಾವ ಮೂಡಬೇಕು. ಸಾಮಾಜಿಕವಾಗಿ, ಆರ್ಥಿಕ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಹಾಗೂ ಸಂಘಟನೆ ಮುಖ್ಯ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಪ್ರತಿಪಾದಿಸಿದರು.

ಆನವಟ್ಟಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ಕೊರಮ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಶರಣ ನೂಲಿ ಚಂದಯ್ಯ ಅವರ 917ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದ ಶರಣ ಬಸವಣ್ಣನವರ ನೇತೃತ್ವದ ಅನುಭವ ಮಂಟಪದಲ್ಲಿ ಸಣ್ಣ ಪಂಗಡದ ಅಲ್ಲಮಪ್ರಭು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಕೊರಮ ಸಮಾಜದ ಶರಣ ನೂಲಿ ಚಂದಯ್ಯ ಅವರು ವಚನಕಾರರ ಸಾಲಿನಲ್ಲಿ ಮುಂಚೂಣಿ ಯಲ್ಲಿ ತಂದರು. ಸಣ್ಣ-ಸಣ್ಣ ಪಂಗಡದ ಜನರು ನಾವು ಸಾಮಾಜಿಕವಾಗಿ ಹಿಂದೆ ಉಳಿದ್ದಿದ್ದೇವೆ ಎಂಬ ಭಾವನೆಯನ್ನು ಬಿಟ್ಟು ಶಿಕ್ಷಣ ಪಡೆಯುವ ಜೊತೆಗೆ ಸಂಘಟಿತರಾಗಿ, ಆಗ ನಿಮಗೆ ಸರ್ಕಾರದ ಎಲ್ಲಾ ಸವಲತ್ತುಗಳು ದೊರೆಯುತ್ತವೆ ಎಂದರು.

ಕರ್ನಾಟಕ ರಾಜ್ಯ ಎಸ್ಸಿ, ಎಸ್‌ಟಿ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಇತರೆ ಪಂಗಡಗಳನ್ನು ಹೊರತು ಪಡಿಸಿ, ಕೊರಮ ಪಂಗಡಗಳಿಗೆ ಶೇ 1 ಮೀಸಲಾತಿ ನೀಡವ ಜೊತೆಗೆ ಅಲೆಮಾರಿ ಪಂಗಡಗಳು ಒಂದು ಕಡೆ ನೆಲಸಲು ಅಲೆಮಾರಿ ಬಡಾವಣೆಗಳನ್ನು (ಲೇಔಟ್‌) ನಿರ್ಮಾಣ, ಸಣ್ಣ ಪಂಗಡಗಳ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲು ಸರ್ಕಾರದ ಗಮನ ಸೆಳೆದು ಕಾರ್ಯರೂಪಕ್ಕೆ ತರುವಂತೆ ಸಚಿವ ಮಧು ಬಂಗಾರಪ್ಪ ಅವರಲ್ಲಿ ಮನವಿ ಮಾಡಲಾಯಿತು.

ತಾಲ್ಲೂಕು ಕೊರಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಚಂದ್ರಪ್ಪ, ಪಂಗಡಗಳ ಸಭೆ-ಸಮಾರಂಭ ಹಾಗೂ ವಿವಾಹ ಸಮಾ ರಂಭ ನಡೆಸಲು ಅನುಕೂಲವಾಗುವಂತೆ ಆನವಟ್ಟಿ ಮತ್ತು ಸೊರಬದಲ್ಲಿ ನಿವೇಶನ ನೀಡುವ ಜೊತೆಗೆ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಲಾಯಿತು.

ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾಪುಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮಾಜದ ಗಣ್ಯರಿಗೆ ಸನ್ಮಾನಿಸಲಾಯಿತು.

ನೂಲಿ ಚಂದಯ್ಯನವರ ಭಾವಚಿತ್ರವನ್ನು ವಿವಿಧ ಕಲಾವಾದ್ಯಗಳ ಮೂಲಕ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಸಚಿವ ಮಧು ಬಂಗಾರಪ್ಪ ಅವರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಮುದಾಯದವರಲ್ಲಿ ಸಂತಸ ಹೆಚ್ಚಲು ಕಾರಣವಾಯಿತು.

ಜಯಂತ್ಯೋತ್ಸವದಲ್ಲಿ ತಹಶೀಲ್ದಾರ್‌ ಮಂಜುಳಾ ಬಿ. ಹೆಗಡಾಳ, ಬಿಇಒ ಪುಷ್ಪಾ, ಸಮಾಜದ ರಾಜ್ಯ ಅಧ್ಯಕ್ಷ ಶಿವಾನಂದ ಭಂಜತ್ರಿ, ಕಾರ್ಯದರ್ಶಿ ಬಿ.ಎಸ್‌ ಆನಂದಕುಮಾರ ಏಕಲವ್ಯ, ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಭಂಜತ್ರಿ, ಕಾರ್ಯದರ್ಶಿ ರವೀಂದ್ರ ಕುಮಾರ್‌, ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ, ಶಿಕ್ಷಕರಾದ ಆಂಜನೇಯ, ದೀಪಕ್‌ ಮುಖಂಡರಾದ ಜೈಶೀಲಪ್ಪ, ಹನುಮೇಶ್‌ ಪ್ರಭಾವತಿ ಬೆಂಗಳೂರು, ಗ್ರಾಪಂ ಸದಸ್ಯೆ ಭಾರತಿ ಇದ್ದರು.