ಸಾರಾಂಶ
ಕುಮಟಾ: ಸಮುದಾಯಗಳ ನಡುವೆ ಸಾಮರಸ್ಯ ಮೂಡಬೇಕು. ಮನಸ್ಸುಗಳು ಒಂದಾದಾಗ ಮಾತ್ರ ಎಲ್ಲ ಕಾರ್ಯವೂ ಸುಸಂಪನ್ನವಾಗಲು ಸಾಧ್ಯ ಎಂಬುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಿಂದೂ ಮುಕ್ರಿ ಸಮಾಜ ಸಾಕ್ಷಿಯಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಪಟ್ಟಣದ ರೈಲು ನಿಲ್ದಾಣ ಬಳಿ ₹೫ ಕೋಟಿ ವೆಚ್ಚದಲ್ಲಿ ಸರ್ಕಾರದಿಂದ ಮಂಜೂರಿಯಾಗಿರುವ ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಕ್ರಿ ಸಮಾಜದ ಸಮುದಾಯ ಭವನದ ಭೂಮಿಪೂಜಾ ಕಾರ್ಯಕ್ರಮ ನೆರವೇರಿಸಿ ನಂತರ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.ಹಿಂದುಳಿದ ಸಮಾಜವನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು. ಕಷ್ಟದಲ್ಲಿರುವ ಸಮಾಜಕ್ಕೆ ಉಳಿದೆಲ್ಲ ಸಮಾಜಗಳು ಬೆಂಬಲ, ಸಹಕಾರ ನೀಡುವ ಮೂಲಕ ಕೈಜೋಡಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಹಿಂದೂ ಮುಕ್ರಿ ಸಮಾಜ ಸಂಘಟಿತರಾಗಿ, ಒಂದಾಗಿ ಬೆರೆತಿರುವುದನ್ನು ನೋಡಿದರೆ ಸಂತೋಷವಾಗಿದೆ. ಹೃದಯ- ಹೃದಯಗಳು ಬೆಸೆಯಬೇಕು, ಹೆಗಲು- ಹೆಗಲುಗಳು ಸೇರಬೇಕು. ಮನಸ್ಸುಗಳು ಒಂದಾದಾಗ ಮಾತ್ರ ಎಲ್ಲವನ್ನೂ ಸಾಧಿಸಬಹುದು. ಒಂದುಗೂಡುವ ಮನಸ್ಥಿತಿ ಇಲ್ಲದೇ ಹೋದಲ್ಲಿ ಯಾರ ಬೆಂಬಲ, ಯಾರ ಸಹಕಾರ ಇದ್ದರೂ ಯಾವ ಕಾರ್ಯವೂ ಸಫಲವಾಗಲಾರದು. ಒಮ್ಮೆ ನಾವು ಒಂದಾದರೆ ಎಲ್ಲ ಕಾರ್ಯವೂ ತಾನಾಗಿಯೇ ನಡೆಯುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಭವನದ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳ್ಳುವವರೆಗೂ ರಾಮಚಂದ್ರಾಪುರಮಠ ಜತೆಯಾಗಿ ನಿಲ್ಲುತ್ತದೆ. ಸಮುದಾಯಭವನಕ್ಕೆ ಏನೆಲ್ಲ ಬೇಕು, ಎಲ್ಲವನ್ನೂ ಈಡೇರಿಸುತ್ತೇವೆ. ಈ ಕಟ್ಟಡದಲ್ಲಿ ಸಂಪತ್ತಿನ ಮಳೆ ಬೀಳುವ ಮೂಲಕ ಭವ್ಯ ಭವನ ನಿರ್ಮಾಣವಾಗಬೇಕು. ಯಾವುದೇ ಭೇದವಿಲ್ಲದೆ ಹಿಂದೂ ಮುಕ್ರಿ ಸಮಾಜದ ದುಡಿಯುವ ಪ್ರತಿಯೊಬ್ಬ ವ್ಯಕ್ತಿ ಒಂದು ರು. ಆದರೂ ದೇಣಿಗೆ ನೀಡುವ ಮೂಲಕ ಈ ಭವ್ಯ ಸಮುದಾಯ ಭವನ ನಿರ್ಮಾಣಕ್ಕೆ ತಾವು ಭಾಗಿಯಾಗಬೇಕು. ಅಲ್ಲದೇ ಬೇರೆಲ್ಲ ಸಮಾಜದ ಪ್ರಮುಖರೂ ಈ ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸಬೇಕು. ಎಲ್ಲ ಜನಪ್ರತಿನಿಧಿಗಳೂ ಸಹ ಜಾತಿ, ಭೇದವನ್ನು ಮರೆತು ಈ ಕಟ್ಟಡಕ್ಕೆ ಅನುದಾನ ನೀಡಬೇಕು. ಒಂದು ವರ್ಷದೊಳಗೆ ಕಟ್ಟಡ ಲೋಕಾರ್ಪಣೆಯಾಗುವ ಹಾಗೆ ಪ್ರತಿಯೊಬ್ಬರೂ ಸಹಕಾರ ನೀಡಬೆಕು ಎಂದರು.ಸಮುದಾಯ ಭವನ ನಿರ್ಮಾಣದಲ್ಲಿ ಸಹಕರಿಸಿದ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಮುಖಂಡರಾದ ಕುಮಾರ ಮಾರ್ಕಾಂಡೇಯಾ ಅವರನ್ನು ಶ್ರೀಗಳು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷದ ಮುಖಂಡರು, ಗಣ್ಯರು, ಹಿಂದು ಮುಕ್ರಿ ಸಮಾಜದ ೧೮ ಹಳ್ಳಿಯ ಯಜಮಾನರು ಪಾಲ್ಗೊಂಡಿದ್ದರು.
ಸಮುದಾಯ ಭವನ ಸಮಿತಿ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ದೇವಾಡಿಗ ಮತ್ತು ಸಿಂಚನಾ ದೇವಾಡಿಗ ಅವರ ಸುಮಧುರ ವಾದ್ಯ ವೃಂದ ಗಮನ ಸೆಳೆಯಿತು. ಹಿಂದು ಮುಕ್ರಿ ಸಮಾಜ ಸಂಘದಿಂದ ಶ್ರೀಗಳಿಗೆ ಫಲ ಸಮರ್ಪಣೆ ನಡೆಯಿತು. ಪುಟಾಣಿ ಆದ್ಯಾ ನಾರಾಯಣ ಮುಕ್ರಿ ಯಕ್ಷಗಾನ ನೃತ್ಯ ಪ್ರದರ್ಶಿಸಿದರು. ಶಿಕ್ಷಕ ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.