ಯಲ್ಲಾಪುರ ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿರಿ ಕಲಾಬಳಗದಿಂದ ಬುಧವಾರ ಸಂಕ್ರಾಂತಿ ಕವಿಗೋಷ್ಠಿ ಆಯೋಜಿಸಲಾಗಿತ್ತು.
ಯಲ್ಲಾಪುರ: ಸೌಹಾರ್ದತೆ, ಸಾಮರಸ್ಯ, ಜೀವನದ ಪ್ರೀತಿ, ಮಾನವೀಯತೆಯನ್ನೂ ನೀಡುವ ಗಟ್ಟಿ ಸಾಹಿತ್ಯ ಬರಬೇಕು. ಸಮಾಜದಲ್ಲಿಂದು ನೆಮ್ಮದಿ, ಶಾಂತಿ ಕಡಿಮೆಯಾಗಿದೆ. ಮಾನವೀಯತೆ ನಮ್ಮಿಂದ ದೂರ ಹೋಗಿದೆ. ಸರ್ವರ ಹಿತ ಒಳಗೊಂಡ ಸಾಹಿತ್ಯ ಬರಬೇಕು ಎಂದು ಹಿರಿಯ ಕವಿ, ಪತ್ರಕರ್ತ ಸುಬ್ರಾಯ ಬಿದ್ರೆಮನೆ ಹೇಳಿದರು.
ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿರಿ ಕಲಾಬಳಗ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ಸಾಹಿತ್ಯ ಗಟ್ಟಿಯಾಗಿದ್ದರೆ ಕತೆ ಕೌತುಕತೆಯನ್ನು ಸೃಷ್ಟಿಸುತ್ತದೆ. ಪುಸ್ತಕ ತನ್ಮಯತೆ ಉಂಟುಮಾಡುತ್ತದೆ. ಆದರಿಂದ ನಮಗೆ ಧಾರಾವಾಹಿಗಳೇ ಕಥೆ, ಚಿಂತನೆಗಳಿಲ್ಲದ ಸಾಹಿತ್ಯ ಬಂದ ಪರಿಣಾಮ ನಾವಿಂದು ಪ್ರಭಾವಿತರಾಗಿದ್ದೇವೆ. ಆ ದೃಷ್ಟಿಯಿಂದ ಇಂತಹ ಕವಿಗೋಷ್ಠಿ, ಸಾಹಿತ್ಯ ಕಾರ್ಯಕ್ರಮಗಳು ನಡೆದಾಗ ಸಾಹಿತ್ಯದ ಚಿಂತನೆ ಉಳಿಯಲು ಸಾಧ್ಯ ಎಂದರು.ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ ಮಾತನಾಡಿ, ನಮ್ಮ ಪರಂಪರೆಯಲ್ಲಿ ಅನಾದಿಕಾಲದಿಂದಲೂ ರಾಮಾಯಣ, ಮಹಾಭಾರತ ಮುಂತಾದ ಕಥೆಗಳ ವಾಚನ-ಪ್ರವಚನ, ಅಧ್ಯಯನ ಇದ್ದವು. ಪದ್ಯ ಸಾಹಿತ್ಯ ವಾಚನಕ್ಕೆ ಮೆರಗು ನೀಡುತ್ತದೆ ಮತ್ತು ಜನರಿಗೆ ಆಸಕ್ತಿ ಉಂಟುಮಾಡುತ್ತದೆ. ಇಂದು ಅಂತಹ ಹಳೆಗನ್ನಡ ಪದ್ಯಗಳೇ ಗಮಕ ಕಲೆಯನ್ನಾಗಿ ನಾವು ಕಾಣುತ್ತಿದ್ದೇವೆ. ಗಮಕದಲ್ಲಿ ರಾಗ, ಭಾವ, ರಸ ಇರುವುದರಿಂದ ಹೆಚ್ಚು ಪರಿಣಾಮ ಉಂಟುಮಾಡಿ ಜನರನ್ನು ತಲುಪುತ್ತದೆ. ಗಮಕದಲ್ಲಿ ಪದ್ಯದ ಜತೆಯಲ್ಲಿ ವ್ಯಾಖ್ಯಾನ ಮಾಡುವುದು ಕೂಡ ಒಂದು ಸೊಗಸಾದ ಪರಿಣಾಮ ಉಂಟುಮಾಡುವುದು. ಆದರೆ ಹಳಗನ್ನಡ ಪದ್ಯಗಳನ್ನು ಕರ್ನಾಟಕ ಶೈಲಿಯಲ್ಲಿ ಹಾಡುವ ಸಂಪ್ರದಾಯ ಇರುವುದರಿಂದ ನಮ್ಮ ಪ್ರದೇಶದಲ್ಲಿ ಅಷ್ಟು ಪ್ರಚಲಿತದಲ್ಲಿಲ್ಲ. ಆ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಗಮಕದ ಕುರಿತು ಚಿಂತನೆ ಮಾಡುವಲ್ಲಿ ಗಮಕ ಪರಿಷತ್ತು ಕಾರ್ಯಕ್ರಮ ಸಂಯೋಜಿಸುತ್ತಿದೆ ಎಂದರು.
ಕವಿಗಳಾದ ಮುಕ್ತಾ ಶಂಕರ, ಜಿ.ಎಸ್. ಗಾಂವ್ಕರ ಕಂಚಿಪಾಲ, ನರಸಿಂಹ ಭಟ್ಟ, ಮಧುಕೇಶ್ವರ ಭಾಗ್ವತ, ಶಿವರಾಮ ಗಾಂವ್ಕರ, ಮಹಾಬಲೇಶ್ವರ ಗಾಂವ್ಕರ, ಶ್ರೀಧರ ಅಣಲಗಾರ, ನರಸಿಂಹ ಹೆಬ್ಬಾರ, ಮಂಗಲಾ ಭಾಗ್ವತ, ಸರೋಜಾ ಭಟ್ಟ ಸ್ವರಚಿತ ಕವನ ವಾಚಿಸಿದರು.ಸಂಘಟಕ ರವೀಂದ್ರ ಭಟ್ಟ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.