ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಅಭಯ ಪೊಲೀಸ್ ಇಲಾಖೆಯ ಪಾತ್ರ ಕೇವಲ ಕಾನೂನು ಪಾಲನೆಗೆ ಸೀಮಿತವಾಗಿಲ್ಲ. ಅದು ಸಮಾಜದ ರಕ್ಷಣೆಯ ಸಂಕೇತವಾಗಿದೆ. ಎಲ್ಲಾ ಧರ್ಮದವರ ಮೇಲೆ ಪ್ರೀತಿ ಇರಲಿ, ಆದರೆ ನಿಮ್ಮ ರಕ್ಷಣಾ ಕಾರ್ಯದ ಮೇಲೆ ಜನರಿಗೆ ಭಯ ಮಿಶ್ರಿತ ಪ್ರೀತಿ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಪೊಲೀಸ್ ಇಲಾಖೆಗೆ ನೂತನವಾಗಿ ನಾಲ್ಕು ವಾಹನಗಳನ್ನು ಹಸ್ತಾಂತರಿಸಿ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳಿ. ಕಾನೂನು, ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಯಾವುದೇ ಮುಲಾಜು ಬೇಡ. ಲೋಪ ಕಂಡುಬಂದರೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡಿದರೆ, ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಡ್ರಗ್ಸ್ (ಮಾದಕ ವಸ್ತು) ಮಾರಾಟ ಮತ್ತು ಸೇವನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಸೇವನೆ ನಡೆಯುತ್ತಿದೆ. ಇದರಿಂದ ಯುವ ಜನತೆಯ ಭವಿಷ್ಯ ಹಾಳಾಗುತ್ತದೆ ಎಂದು ವಿಷಾದಿಸಿದ ವ್ಯಕ್ತಪಡಿಸಿದರು.
ರಾತ್ರಿ ವೇಳೆ ನಡೆಯುವ ಕಳ್ಳತನಗಳನ್ನು ತಡೆಗಟ್ಟಲು ವಿಶೇಷ ದಳವನ್ನು ನಿರ್ಮಿಸಿ, ನಿರಂತರ ರಾತ್ರಿ ಗಸ್ತು ತಿರುಗಿಸಬೇಕು. ಆದಷ್ಟು ಬೇಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಐಟಿಎಂಎಸ್ ಎ.ಐ. ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ತಡೆಗಟ್ಟಲು ಮತ್ತು ಅಪರಾಧಿ ಗಳನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ್ ಕುರೇರ, ಜಿಲ್ಲಾ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಜಮಖಂಡಿ ಎಸಿ ಶ್ವೇತಾ ಭೀಡಕರ, ಡಿವೈಎಸ್ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಹದೇವ ಶಿರಹಟ್ಟಿ, ಪಿಎಸ್ಐ ಅಜಿತ್ ಹೊಸಮನಿ ಹಾಗೂ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಸಿಸಿ ಕ್ಯಾಮೆರಾ ನೀಡಲು ಸಮ್ಮತಿ:ಮುಧೋಳ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಅರಳಿಕಟ್ಟಿ ಫೌಂಡೇಶನ್ ನಿಂದ ಹತ್ತು ಕ್ಯಾಮೆರಾ ನೀಡುವುದಾಗಿ ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ ತಿಮ್ಮಣ್ಣ ಅರಳಿಕಟ್ಟಿ ಘೋಷಣೆ ಮಾಡಿದರು.