ವಿದ್ಯೆಯೊಂದಿಗೆ ನೈತಿಕತೆ ಇರಲಿ

| Published : Dec 24 2023, 01:45 AM IST

ಸಾರಾಂಶ

ಇಂದಿನ ಗ್ಲೋಬಲ್ ಯುಗದಲ್ಲಿ ಎಲ್ಲ ರೀತಿಯ ವಿದ್ಯೆಗೂ ಸಮಾನ ಅವಕಾಶಗಳಿದ್ದು ವಿದ್ಯೆಯ ಕುರಿತು ಕೀಳರಿಮೆ ಬೇಡ

ಭಟ್ಕಳ: ವಿದ್ಯೆಯ ಜತೆಗೆ ನೈತಿಕ ಮೌಲ್ಯ ಅಳವಡಿಸಿಕೊಂಡಾಗ ಮಾತ್ರ ವಿದ್ಯೆಗೆ ಗೌರವ ದೊರೆಯುತ್ತದೆ. ಹಣಕ್ಕಿಂತ ವಿದ್ಯೆಗೆ ಮಹತ್ವದ ಸ್ಥಾನ ಇದೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.ಅವರು ಪಟ್ಟಣದ ಅಯೋಧ್ಯಾ ನಗರದಲ್ಲಿರುವ ಶ್ರೀಗುರು ಸುಧೀಂದ್ರ ಕಾಲೇಜಿನ ಆವರಣದಲ್ಲಿ ಶುಕ್ರವಾರ ಗ್ರಂಥಾಲಯ, ಕೊಠಡಿ ಹಾಗೂ ಇನ್ಫೋಸಿಸ್ ಬ್ಲಾಕ್‌ನ ಮೂರನೇ ಮಹಡಿ ಮತ್ತು ಕಂಪ್ಯೂಟರ್ ಲ್ಯಾಬ್‌ ಉದ್ಘಾಟಿಸಿ ಆನಂತರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಎಷ್ಟೇ ಉತ್ತಮ ರ‍್ಯಾಂಕ್, ಚಿನ್ನದ ಪದಕ ಗಳಿಸಿದರೂ ನೈತಿಕ ಮೌಲ್ಯ ಬೆಳೆಸಿಕೊಳ್ಳದಿದ್ದಲ್ಲಿ ವಿದ್ಯೆಯು ವ್ಯರ್ಥವಾಗುವುದು. ಇಂದಿನ ಗ್ಲೋಬಲ್ ಯುಗದಲ್ಲಿ ಎಲ್ಲ ರೀತಿಯ ವಿದ್ಯೆಗೂ ಸಮಾನ ಅವಕಾಶಗಳಿದ್ದು ವಿದ್ಯೆಯ ಕುರಿತು ಕೀಳರಿಮೆ ಬೇಡವೆಂದು ಕಿವಿಮಾತು ಹೇಳಿದರು.ಶಿಕ್ಷಣಕ್ಕೆ ಯಾವುದೇ ಪರಿಧಿ ಇಲ್ಲ. ಪ್ರತಿಯೊಂದು ಶಿಕ್ಷಣಕ್ಕೂ ಕೂಡಾ ಅದರದ್ದೇ ಆದ ಮಹತ್ವವಿದೆ ಎಂದ ಅವರು, ಕೌಶಲ್ಯವೂ ಕೂಡಾ ತನ್ನದೇ ಆದ ಮಹತ್ವ ಹೊಂದಿದೆ ಎಂದರು. ಎಲ್ಲೆಡೆ ಹಣವಂತರಿಗಿಂತ ವಿದ್ಯಾವಂತರೇ ಗೌರವಿಸಲ್ಪಡುತ್ತಾರೆ. ಹಣವಂತರಿಗೆ ದೊರೆಯುವ ಗೌರವ ಕ್ಷಣಿಕವಾದರೆ ವಿದ್ಯಾವಂತರಿಗೆ ಸದಾ ಗೌರವ ದೊರೆಯುವುದು ಎಂದರು.ಸಭಾ ಕಾರ್ಯಕ್ರಮದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಸುರೇಶ ನಾಯಕ, ಉಪಾಧ್ಯಕ್ಷ ಸುರೇಂದ್ರ ಶ್ಯಾನುಭಾಗ, ಟ್ರಸ್ಟಿಗಳಾದ ಆರ್.ಜಿ. ಕೊಲ್ಲೆ, ರಾಜೇಶ ನಾಯಕ, ನಾಗೇಶ ಭಟ್ಟ, ಶ್ರೀಧರ ಶ್ಯಾನುಭಾಗ, ರಮೇಶ ಖಾರ್ವಿ, ಗುರುದತ್ತ ಶೇಟ್ ಉಪಸ್ಥಿತರಿದ್ದರು. ಟ್ರಸ್ಟಿ ಪ್ರದೀಪ ಜಿ.ಪೈ. ಸ್ವಾಗತಿಸಿದರು. ಉಪನ್ಯಾಸಕರಾದ ವಿಶ್ವನಾಥ ಭಟ್ಟ, ದೇವೇಂದ್ರ ಕಿಣಿ ನಿರೂಪಿಸಿದರು. ಪ್ರಾಂಶುಪಾಲ ಶ್ರೀನಾಥ ಪೈ ವಂದಿಸಿದರು. ಆಡಳಿತ ಮಂಡಳಿಯ ಆರ್‌.ಜಿ. ಕೊಲ್ಲೆ, ಸುರೇಂದ್ರ ಶ್ಯಾನಭಾಗ ಶ್ರೀಗಳ ಪಾದ ಪೂಜೆ ನೆರವೇರಿಸಿದರು.