ಮಾರಿಕಾಂಬಾ ಜಾತ್ರೆಗೆ ನೀರಿನ ಕೊರತೆ ಆಗದಿರಲಿ

| Published : Mar 08 2024, 01:51 AM IST

ಸಾರಾಂಶ

ಮಾರಿಕಾಂಬಾ ಜಾತ್ರೆಗೆ ನೀರಿನ ಕೊರತೆಯಾಗದಂತೆ ಕೊಳವೆ ಬಾವಿ ದುರಸ್ತಿ ಮಾಡಿಸಿಟ್ಟುಕೊಳ್ಳಬೇಕು. ಕೆಂಗ್ರೆ, ಮಾರಿಗದ್ದೆ ಜಲಮೂಲ ಬತ್ತಿದ ನಂತರ ಕೊಳವೆಬಾವಿ ಬಳಸಿಕೊಳ್ಳಬೇಕು.

ಶಿರಸಿ:

ನಗರದ ಮಾರಿಕಾಂಬಾ ಜಾತ್ರೆಗೆ ನೀರಿನ ಕೊರತೆಯಾಗದಂತೆ ಕೊಳವೆ ಬಾವಿ ದುರಸ್ತಿ ಮಾಡಿಸಿಟ್ಟುಕೊಳ್ಳಬೇಕು. ಕೆಂಗ್ರೆ, ಮಾರಿಗದ್ದೆ ಜಲಮೂಲ ಬತ್ತಿದ ನಂತರ ಕೊಳವೆಬಾವಿ ಬಳಸಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಗುರುವಾರ ನಗರದ ತಹಸೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ನಡೆದ ಮಾರಿಕಾಂಬಾ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ನಿಲೇಕಣಿ ಬಳಿ ರಸ್ತೆ ಕಾಮಗಾರಿಯನ್ನು ಜಾತ್ರೆ ಪೂರ್ವ ಸ್ಥಗಿತ ಮಾಡಿ ಜಾತ್ರೆಯ ನಂತರ ಆರಂಭಿಸಲು ಸೂಚಿಸಲಾಗುವುದು ಎಂದ ಅವರು, ನಗರಸಭೆ ಸದಸ್ಯರ ತಂಡ ರಚಿಸಿ ಅವರಿಗೆ ಒಂದೊಂದು ಜವಾಬ್ದಾರಿ ವಹಿಸಬೇಕು ಎಂದರು.ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ, ಈಗಾಗಲೇ ಜಾತ್ರಾ ವಿಧಿ-ವಿಧಾನ ನಡೆದಿದೆ. ಜಾತ್ರೆ ವೇಳೆ ವಾಹನಗಳ ನಿಲುಗಡೆಗೆ ಹೆಚ್ಚಿನ ಜಾಗ ಒದಗಿಸುವ ಕಾರ್ಯ ಆಗಬೇಕು. ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ದೇವಾಲಯದಲ್ಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದರೂ ಹೆಚ್ಚುವರಿ ನೀರು ಬೇಕಾದರೆ ನಗರಸಭೆ ಮೊರೆ ಹೋಗುವುದು ಅನಿವಾರ್ಯ. ಜತೆಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ನೀರು, ಪಾನಕದ ವ್ಯವಸ್ಥೆ ಕೈಗೊಳ್ಳಲು ದೇವಾಲಯದ ವತಿಯಿಂದ ನಿರ್ಣಯಿಸಿದ್ದು, ನಗರಸಭೆ ಕೈಜೋಡಿಸಬೇಕು. ಅನ್ನ ಪ್ರಸಾದ ವಿತರಣೆಗೆ ದೇವಾಲಯದ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಹೇಳಿದರು.ಜಾತ್ರಾ ಪ್ಲಾಟ್ ಹರಾಜು ಆದ ನಂತರ ಅಧಿಕೃತ ಹರಾಜುದಾರರು ವಿವಿಧ ಇಲಾಖೆಗಳ ಅನುಮತಿಗೆ ಕಾಯುವಂತಾಗುತ್ತದೆ. ಅವರಿಗೆ ತಕ್ಷಣ ಅನುಮತಿ ನೀಡಬೇಕು ಎಂದರು.ಪೌರಾಯುಕ್ತ ಕಾಂತರಾಜ್ ಮಾತನಾಡಿ, ಜಾತ್ರೆ ಸಂಬಂಧ 24 ಕಾಮಗಾರಿಗಳ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ. ಸ್ವಚ್ಛತೆ ಹಿನ್ನೆಲೆ 75 ಹೆಚ್ಚುವರಿ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಸಾರಿಗೆ ಇಲಾಖೆಯ ಸರ್ವೇಶ ನಾಯ್ಕ ಮಾತನಾಡಿ, ಜಾತ್ರೆಗೆ ವಿಶೇಷವಾಗಿ 200 ಬಸ್ ಹೆಚ್ಚುವರಿ ಬಿಡಲಾಗುವುದು. ಬಸ್ ನಿಲುಗಡೆ ಸಂಬಂಧ ರಾಯಪ್ಪ ಹುಲೇಕಲ್ ಮತ್ತು ಹನುಮಾನ್ ವ್ಯಾಯಾಮ ಶಾಲೆ ಬಳಿ ವ್ಯವಸ್ಥೆ ಆಗಬೇಕು ಎಂದರು. ಸಿಪಿಐ ಶಶಿಕಾಂತ ವರ್ಮ ಮಾತನಾಡಿ, ಜಾತ್ರೆ ಭದ್ರತೆಗೆ 970 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಜಾತ್ರಾ ಗದ್ದುಗೆ ಸಮೀಪ 20 ಪುರುಷ ಹಾಗೂ ಮಹಿಳಾ ಕಮಾಂಡೋ ತಂಡ ಕಾರ್ಯನಿರ್ವಹಿಸಲಿದೆ. ವಾಹನ ನಿಲುಗಡೆ, ವಾಹನ ದಟ್ಟಣೆ, ಸಹಾಯವಾಣಿ ಸೇರಿದಂತೆ ಹೆಚ್ಚಿನ ಮಾಹಿತಿಗೆ sirsipolice.in ವೆಬ್‌ಸೈಟ್ ಆರಂಭಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಕೆಯೂ ಆಗಲಿದೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಅಪರ್ಣಾ ರಮೇಶ, ಡಿಎಸ್ಪಿ ಮುತ್ತಪ್ಪ ಪಾಟೀಲ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್ ಇದ್ದರು.