ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬೇಸಿಗೆ ಪ್ರಾರಂಭವಾಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಹನೂರು ಶಾಸಕ ಮಂಜುನಾಥ್ ಹೇಳಿದರು.ತಾಲೂಕು ಪಂಚಾಯ್ತಿಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯನ್ನುದ್ದೆಶಿಸಿ ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೆ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಜಾಗೃತರಾಗಬೇಕು, ಸಮಸ್ಯೆ ಕಂಡು ಬಂದಲ್ಲಿ ತುರ್ತು ಸ್ಪಂದಿಸಬೇಕು ಎಂದು ಸೂಚಿಸಿದರು. ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಈ ಭಾಗದಲ್ಲೂ ಸಮಸ್ಯೆ ಕಂಡು ಬಂದಲ್ಲಿ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕ್ರಮಕ್ಕೆ ಸಜ್ಜಾಗಿದೆ ಎಂದರು. ಬೇಸಿಗೆ ಹಿನ್ನೆಲೆ ಕಾಡಂಚಿನ ಗ್ರಾಮಗಳಿಗೆ ಬೆಂಕಿ ತಗುಲದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮಗಳಲ್ಲಿ ಇರುವ ಸಮಸ್ಯೆಗಳನ್ನು ನಕ್ಷೆ ಮೂಲಕ ತೋರಿಸಿ ಅವುಗಳನ್ನು ಸರಿಪಡಿಸಿ ಕ್ರಮವಹಿಸುವ ಕುರಿತು ಶಾಸಕರು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಬಸವರಾಜು, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಇನ್ನಿತರರಿದ್ದರು.
9 ಫಲಾನುಭವಿಗಳಿಗೆ ಲ್ಯಾಪ್‌ಟ್ಯಾಪ್ ವಿತರಣೆ:ಇದೆ ವೇಳೆ ಶಾಸಕರು 2023-24 ನೇ ಸಾಲಿನ ತಾಪಂ ವಿಕಲಚೇತನರ ಶೇ.5ರಷ್ಟು ಅನುದಾನದಲ್ಲಿ 9 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಉಚಿತ ಲ್ಯಾಪ್‌ಟಾಪ್ ಅನ್ನು ಹನೂರು ಶಾಸಕ ಎಂ.ಆರ್.ಮಂಜುನಾಥ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಇಂದು ಸವಲತ್ತು ಪಡೆದ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು, ಸರ್ಕಾರ ಅನೇಕ ಸವಲತ್ತುಗಳು ನೇರ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಬಸವರಾಜು, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಎಂ.ಆರ್.ಡಬ್ಲ್ಯೂ ಕವಿರತ್ನ ಇನ್ನಿತರರು ಇದ್ದರು.