ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಬರವನ್ನು ನಿರ್ಲಕ್ಷ್ಯ ಮಾಡಿದೆ.
ಶಿಗ್ಗಾಂವಿ: ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಕೇವಲ ನಾಟಕೀಯ ಆಡಳಿತವನ್ನು ಮಾಡದೆ, ಕೂಡಲೇ ಶಾಶ್ವತ ಮತ್ತು ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ತಾಲೂಕಿನ ಬಂಕಾಪೂರ ಪಟ್ಟಣದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಬರವನ್ನು ನಿರ್ಲಕ್ಷ್ಯ ಮಾಡಿದೆ. ಮುಖ್ಯಮಂತ್ರಿಗಳು ಕೇವಲ ನಾಮಕಾವಸ್ಥೆಗೆ ಒಂದೆರಡು ಕಡೆಗಳಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫೆರೆನ್ಸ್ ಮಾಡಿದರೆ ಬರ ನಿರ್ವಹಿಸಲು ಸಾಧ್ಯವಿಲ್ಲ, ರಾಜ್ಯದಲ್ಲಿ ಕಳೆದ ಎರಡು ದಶಕಗಳಲ್ಲಿ ಅತ್ಯಂತ ತೀವ್ರವಾದ ಬರಗಾಲ ಆವರಿಸಿದ್ದು, ಹಸಿ ಬರ ಹಾಗೂ ಒಣ ಬರ ಎರಡೂ ಪರಿಸ್ಥಿತಿಗಳು ಎದುರಾಗಿವೆ. ಮುಂಗಾರು ಮಳೆಯನ್ನು ನಂಬಿ ಬಿತ್ತಿದ ಬೀಜ, ಗೊಬ್ಬರ ಎಲ್ಲವೂ ನಷ್ಟವಾಗಿದ್ದು, ದನ-ಕರುಗಳಿಗೆ ಮೇವಿನ ತೀವ್ರ ಕೊರತೆಯುಂಟಾಗಿದೆ. ಅಕ್ಟೋಬರ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲೇ ಈ ಪರಿಸ್ಥಿತಿಯಿದ್ದರೆ, ಜನವರಿ-ಫೆಬ್ರವರಿಯಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ತಿಳಿಸಿದ್ದಾರೆ.ಮುಖ್ಯಮಂತ್ರಿ, ಸಚಿವರು, ಡೆಪ್ಯೂಟಿ ಕಮಿಷನರ್ ಮತ್ತು ಅಸಿಸ್ಟೆಂಟ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಲ್ಲೇ ಆದೇಶಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ತುರ್ತು ಕಾಮಗಾರಿಗಳಿಗಾಗಿ ಮತ್ತು ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ ₹ 10 ಕೋಟಿ ಬಿಡುಗಡೆ ಮಾಡಬೇಕು. ಅಲ್ಲದೆ ಮೇವು ಬೆಳೆಸಲು ಮತ್ತು ದೂರದಿಂದ ಸಾಗಾಣಿಕೆ ಮಾಡಲು ಪ್ರತಿ ತಾಲೂಕಿಗೆ ₹ 10 ಕೋಟಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ ಬೊಮ್ಮಾಯಿ, ಜೀ ರಾಮ್‌ಜಿಯಂತಹ ತಂತ್ರಜ್ಞಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ದಿನಕ್ಕೆ 150 ಜನರಿಗೆ ಕೂಲಿ ನೀಡಬಹುದು ಹಾಗೂ ಉತ್ತಮ ಕಾಮಗಾರಿಗಳನ್ನು ಮಾಡಬಹುದು, ಆದರೆ ಸರ್ಕಾರದ ಬಳಿ ಈ ಬಗ್ಗೆ ಯಾವುದೇ ಪರಿಕಲ್ಪನೆ ಇಲ್ಲ ಎಂದು ಹರಿಹಾಯ್ದರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಇದ್ದರು.