ಸಾರಾಂಶ
ಕ್ಷಯಮುಕ್ತ ಅಭಿಯಾನದಲ್ಲಿ ಟಿಎಚ್‍ಒ ಡಾ.ಬಿ.ವಿ.ಗಿರೀಶ್ ಮನವಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕ್ಷಯ ರೋಗ ನಿಯಂತ್ರಣ ಸಾರ್ವಜನಿಕ ಕಾಳಜಿ ಆಗಬೇಕು ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ತಾಲೂಕಿನ ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಜರುಗಿದ ಕ್ಷಯ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷಯ ರೋಗವು ಭಾರತದ ಸಾರ್ವಜನಿಕ ಆರೋಗ್ಯಕ್ಕೆ ಅತಿ ದೊಡ್ಡ ತೊಂದರೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಜನ ಕ್ಷಯರೋಗಕ್ಕೆ ತುತ್ತಾಗುತ್ತಾರೆ. ಭಾರತವನ್ನು ಕ್ಷಯ ಮುಕ್ತಗೊಳಿಸಲು ಸಮುದಾಯವು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಾ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕ್ಷಯರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರು ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟುಮಾಡುತ್ತದೆ ಎಂದು ಹೇಳಿದರು.ಕ್ಷಯ ರೋಗಿಗಳು ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರ ಇಟ್ಟುಕೊಳ್ಳಬೇಕು. ರೋಗಿಯ ಕಫವನ್ನು ಮನಸ್ಸಿಗೆ ಬಂದ ಕಡೆ ಉಗಿಯಬಾರದು. ಕಫವನ್ನು ಡಬ್ಬಿಯಲ್ಲಿ ಶೇಖರಿಸಿ ಗುಂಡಿ ತೋಡಿ ಮುಚ್ಚಬೇಕು. ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ಹಾಕಿಸಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ನಿಮ್ಮ ಮನೆ ಹಾಗೂ ಸುತ್ತಮುತ್ತಲಿನವರಲ್ಲಿ ಟಿಬಿ ರೋಗದ ಲಕ್ಷಣಗಳು ಉಳ್ಳುವವರನ್ನು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕು. ಟಿಬಿ ರೋಗವನ್ನು ಬೇಗ ಪತ್ತೆ ಹಚ್ಚಿ ಪೌಷ್ಟಿಕ ಆಹಾರ ಸೇವಿಸಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಕ್ಷಯ ರೋಗದ ಅಪಾಯ ಇರುವವರನ್ನು ಆರೈಕೆ ಮಾಡಿ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿದರು. ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಚಿನ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಂಕರ್ ನಾಯಕ್, ಪ್ರವೀಣ್ ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿ ಲೋಹಿತ್ ಕುಮಾರ್, ಪ್ರಯೋಗಶಾಲಾ ತಂತ್ರಜ್ಞ ನಾಗರಾಜ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸುಧಾ, ಪ್ರಿಯಾಂಕಾ, ಕೆ.ಟಿ.ದೇವೇಂದ್ರ ಉಪಸ್ಥಿತರಿದ್ದರು.