ಸಾರಾಂಶ
ಹೊಸಪೇಟೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ನಗರದ ಸುರಭಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬ್ರಹ್ಮಕುಮಾರಿಸ್ 2025-26ನೇ ವಾರ್ಷಿಕ ಸೇವಾ ಯೋಜನೆಯ ಕಾರ್ಯಕ್ರಮವನ್ನು ರಾಜಸ್ಥಾನದ ಮೌಂಟ್ ಅಬು ಬ್ರಹ್ಮಕುಮಾರಿಸ್ ಸಹ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ ದೀದಿಜಿ ಉದ್ಘಾಟಿಸಿದರು.
ಹೊಸಪೇಟೆ: ನಮ್ಮ ಪಂಚೇಂದ್ರಿಯಗಳ ಅಪೇಕ್ಷೆ ಬೇರೆ, ಬೇರೆಯಾದರೂ ಅವುಗಳ ಮಧ್ಯೆ ಸಾಮ್ಯತೆ ಇಲ್ಲದಿದ್ದರೆ ಏನನ್ನೂ ಸಾಧನೆ ಮಾಡಲಾಗದು. ನಾವು ಮಾಡುವ ಸಾಧನೆ ನಿಸ್ವಾರ್ಥವಾದಾಗ ಈ ಸಮನ್ವಯ ಸಾಧ್ಯವಾಗಲಿದೆ. ಇದನ್ನು ರಾಜಯೋಗದಿಂದ ಮಾತ್ರ ಪಡೆಯಲು ಸಾಧ್ಯ ಎಂದು ರಾಜಸ್ಥಾನದ ಮೌಂಟ್ ಅಬು ಬ್ರಹ್ಮಕುಮಾರಿಸ್ ಸಹ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ ದೀದಿಜಿ ಹೇಳಿದರು.
ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ನಗರದ ಸುರಭಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬ್ರಹ್ಮಕುಮಾರಿಸ್ 2025-26ನೇ ವಾರ್ಷಿಕ ಸೇವಾ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಾಂತಿಯ ಭೇದ, ವರ್ಣ ಭೇದ, ಲಿಂಗ ಭೇದ, ಆರ್ಥಿಕ ಬೇದಗಳ ನಡುವೆ ಆತ್ಮ ಮತ್ತು ಪರಮಾತ್ಮನ ಜೋಡಣೆಯೇ ಧ್ಯಾನವಾಗಿದೆ. ಹಾಗಾಗಿ ಆಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಪ್ರಾಂತೀಯ ಮುಖ್ಯಸ್ಥ ಡಾ. ಬಿ.ಕೆ. ಬಸವರಾಜ ಮಾತನಾಡಿ, ಅಶಾಂತಿಯ ಮನಸ್ಥಿತಿಗೆ ಆಸೆ, ಆಕಾಂಕ್ಷೆಗಳೇ ಕಾರಣ. ಈ ಕಾರಣಕ್ಕಾಗಿಯೇ ನಮಗೆ ದುಃಖ ಪ್ರಾಪ್ತವಾಗಿದೆ. ಇದನ್ನು ಸರಿದೂಗಿಸುವ ಕಾರ್ಯ ಪರಮಾತ್ಮನಿಂದ ಮಾತ್ರ ಸಾಧ್ಯವಾಗಲಿದೆ. ಇದು ಕಲಿಯುಗದ ಅಂತ್ಯದ ಸಂಕೇತವೂ ಆಗಿದೆ. ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇಂತಹ ಸತ್ಯವನ್ನು ತಿಳಿಸುವ ಮತ್ತು ಏಕತೆ ಸಾಧಿಸುವ ರಾಜಯೋಗದ ಮಾರ್ಗವನ್ನು ತಿಳಿಸಲಿದೆ. ಸತ್ಯ ಅರಿಯುವ ದಾರಿ ತೋರಿಸಲಿದ್ದು, ನಾವೆಲ್ಲರೂ ಅದನ್ನು ಅರಿತು ವಿಶ್ವ ಶಾಂತಿಗೆ ಸಂದೇಶ ಸಾರಬೇಕು ಎಂದರು.ಗದಗದ ಜಯಂತಿ, ಗಂಗಾವತಿಯ ಸುಲೋಚನಾ, ಆಲೂರಿನ ಲಕ್ಷ್ಮಿ, ಯೋಗಿನಿ, ಶಿವಮೊಗ್ಗದ ಸ್ವಾತಿ, ನಗರದ ಸಂಚಾಲಕಿ ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಶಶಿಧರ ಇತರರಿದ್ದರು.