ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರ ಹತ್ಯೆ ಸಂಚು ನಡೆಸಿದವರ ಪತ್ತೆಯಾಗಲಿ

| Published : Aug 14 2024, 12:53 AM IST

ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರ ಹತ್ಯೆ ಸಂಚು ನಡೆಸಿದವರ ಪತ್ತೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಜಾ ಸೇವನೆ ಪ್ರವೃತ್ತಿಗೆ ಬಿದ್ದಿರುವ 16 ವರ್ಷದ ಹುಡುಗರು ನಶೆಯಲ್ಲಿ ಅನಾಹುತ ಮಾಡುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಇವರನ್ನು ಕೇವಲ ಬಂಧಿಸಿದರೆ ಸಾಲದು, ಇಸ್ಮಾಯಿಲ್‌ ತಮಟಗಾರ ಹತ್ಯೆ ಹಿಂದಿನ ದುಷ್ಟಶಕ್ತಿ ಬಯಲಿಗೆ ತರಲು ದೀಪಕ್‌ ಚಿಂಚೋರೆ ಆಗ್ರಹಿಸಿದ್ದಾರೆ.

ಧಾರವಾಡ:

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸಂಚು ನಡೆಸಿರುವುದು ಆಂತಕದ ವಿಷಯ. ಇದರ ಹಿಂದಿನ ದುಷ್ಟಶಕ್ತಿ ಪತ್ತೆ ಮಾಡುವಂತೆ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಮಾಯಿಲ್ ತಮಟಗಾರ ತಮ್ಮ ಹತ್ಯೆಯ ಷಡ್ಯಂತ್ರದ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ಬಗ್ಗೆ ಚಿಂಚೋರೆ ಬೇಸರ ವ್ಯಕ್ತಪಡಿಸಿದರು. ತಮಟಗಾರ ಜಾತ್ಯತೀತ ನಾಯಕ. ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರವೂ ನಡೆದಿದೆ. ಹೀಗಾಗಿ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮಕೈಗೊಳ್ಳಲು ಆಯುಕ್ತರಿಗೆ ಒತ್ತಾಯಿಸಿದರು.

ಗಾಂಜಾ ಸೇವನೆ ಪ್ರವೃತ್ತಿಗೆ ಬಿದ್ದಿರುವ 16 ವರ್ಷದ ಹುಡುಗರು ನಶೆಯಲ್ಲಿ ಅನಾಹುತ ಮಾಡುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಇವರನ್ನು ಕೇವಲ ಬಂಧಿಸಿದರೆ ಸಾಲದು, ಹತ್ಯೆ ಹಿಂದಿನ ದುಷ್ಟಶಕ್ತಿ ಬಯಲಿಗೆ ತರಲು ಆಗ್ರಹಿಸಿದರು.

ಯೂತ್ ಕಾಂಗ್ರೆಸ್ ಚುನಾವಣೆಗೂ, ಇಸ್ಮಾಯಿಲ್‌ ತಮಟಗಾರ ಹತ್ಯೆಯ ಸಂಚಿಗೂ ಸಂಬಂಧವಿಲ್ಲ. ಬೈಲಾ ಪ್ರಕಾರ ಕ್ರಿಮಿನಲ್ ಪ್ರಕರಣ ಹಿನ್ನಲೆ ಇರುವ ವ್ಯಕ್ತಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

ಭವಿಷ್ಯದಲ್ಲಿ ನನ್ನ ಮೇಲೆ ಹಲ್ಲೆ ಅಥವಾ ಹತ್ಯೆ ಸಂಚು ರೂಪಿಸುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ ದೀಪಕ್ ಚಿಂಚೋರೆ, ಇಸ್ಮಾಯಿಲ್ ತಮಟಗಾರ ಅವರಿಗೆ ರಕ್ಷಣೆ ನೀಡುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹು-ಧಾ ಪಾಲಿಕೆ ಸದಸ್ಯರಾದ ಡಾ. ಮಯೂರ ಮೋರೆ, ಶಂಭು ಸಾಲಮನಿ, ಮಂಜುನಾಥ ಬಟಕುರಿ, ಶಂಭು ಮುಶಣ್ಣವರ, ರಾಜು ಎಚ್.ಎಂ., ಕವಿತಾ ಕಬ್ಬೇರ, ಬಸವರಾಜ ಕಿತ್ತೂರ, ನಾಗರಾಜ ಗುರಿಕಾರ ಇದ್ದರು.