ಸಾರಾಂಶ
ಧಾರವಾಡ: ಪಾಲಕರು ತಮ್ಮ ಮಕ್ಕಳಿಗೆ ಶರಣ- ಶರಣೆಯರ ವಚನಗಳನ್ನು ಕಲಿಸುವುದರ ಮೂಲಕ ಅವರ ಜೀವನದ ಹೋರಾಟದ ಅರಿವನ್ನು ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ. ಗೋ.ರು. ಚನ್ನಬಸಪ್ಪ ಹೇಳಿದರು.
ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಅಕ್ಕಮಾಹಾದೇವಿ ಜಯಂತಿ ನಿಮಿತ್ತ ರತಿಕಾ ನೃತ್ಯ ನಿಕೇತನ ಏರ್ಪಡಿಸಿದ್ದ ಅಕ್ಕನ ಜೀವನದ ಪ್ರಮುಖ ಘಟ್ಟದ ಸನ್ನಿವೇಶಗಳನ್ನು ಆಯ್ದು, 13 ವಚನಗಳಿಗೆ ದೃಶ್ಯ ಕಾವ್ಯದ ಮೂಲಕ ಸಂಯೋಜಿಸಿ ವೈರಾಗ್ಯ ನಿಧಿ ಅಕ್ಕ ಅನ್ನುವ ವಿಶಿಷ್ಟ ನೃತ್ಯ ರೂಪಕ ಉದ್ಘಾಟಿಸಿ ಮಾತನಾಡಿದರು.12ನೇ ಶತಮಾನದಿಂದಲೇ ಮಹಿಳೆಯರ ಆತ್ಮಗೌರವಕ್ಕಾಗಿ ನಡೆದ ಹೋರಾಟವು ಅಕ್ಕನಿಂದ ಪ್ರಾರಂಭವಾದರೂ ಸಹ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ಜರಗುತ್ತಿರುವ ಈ 21ನೇ ಶತಮಾನದಲ್ಲೂ ಅಕ್ಕನ ವಿಚಾರಧಾರೆಗಳು ಮಹಿಳೆಯರ ಆತ್ಮಬಲ, ಮನೋಬಲವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ ಎಂದರು.
ಮಹಾನ್ ವ್ಯಕ್ತಿಗಳ ಫೋಟೋ ಇಟ್ಟು ಪೂಜೆ ಮಾಡಿ ಜಯಕಾರ ಹಾಕುವುದಕ್ಕಿಂತ ಮಕ್ಕಳನ್ನು ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೊಡಗಿಸಿ, ಅವರಲ್ಲಿ ಅಕ್ಕನ ವಿಚಾರಧಾರೆ ಬಿತ್ತುವ ಕಾರ್ಯವಾದಾಗ ಮಾತ್ರ, ಅಕ್ಕ ಕಂಡ ಕನಸು ನನಸಾಗಲು ಸಾಧ್ಯ ಎಂದರು.ತತ್ವಜ್ಞಾನಿಯ ಆತ್ಮ- ಮೆದುಳಿನಲ್ಲಿ, ಕವಿಯ ಆತ್ಮ- ಹೃದಯದಲ್ಲಿ, ಗಾಯಕನ ಆತ್ಮ-ಕಂಠದಲ್ಲಿ ಇದ್ದರೆ ನೃತ್ಯಗಾರ್ತಿಯ ಆತ್ಮ-ಪೂರ್ತಿ ಶರೀರದಲ್ಲಿ ಇರುತ್ತದೆ. ಆದುದರಿಂದ ಭಾವನಾತ್ಮಕವಾಗಿ ನೃತ್ಯಗಾರ್ತಿ ನೀಡುವ ಸಂದೇಶ ಬಹುಕಾಲ ಮನದಲ್ಲಿ ಸ್ಥಿರವಾಗಿ ಉಳಿಯುತ್ತದೆ ಎಂದರು.
ವಿದುಷಿ ನಾಗರತ್ನ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, 130ಕ್ಕೂ ಹೆಚ್ಚಿನ ಹಿರಿ-ಕಿರಿಯ, ಎಲ್ಲ ಜಾತಿ, ಮತ ಪಂಥದ ಕಲಾವಿದರು ಒಳಗೊಂಡಿದ್ದು, ಇದರ ಮುಖ್ಯ ಉದ್ದೇಶ ಅಕ್ಕ ಕಂಡ ಸಮಾನತೆಯ ಕನಸಿನ ಬೀಜವನ್ನು, ವಚನಗಳ ಸಾರವನ್ನು ಮಕ್ಕಳ ಮನದಲ್ಲಿ ಬಿತ್ತುವುದಾಗಿದೆ. 12ನೇ ಶತಮಾನದ ಅನುಭವ ಮಂಟಪದ ಚಿತ್ರಣವನ್ನು ನೃತ್ಯದಲ್ಲಿ ಸಂಯೋಜನೆಗೋಳಿಸಿ ಪ್ರದರ್ಶಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ ಎಂದರು.ಅಥಣಿ ಮೊಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಯುವಕ- ಯುವತಿಯರು ಆಧುನಿಕ ತಂತ್ರಜ್ಞಾನದ ವ್ಯಸನಕ್ಕೆ ಬಲಿಯಾಗಿ, ತಮ್ಮ ಜೀವನವನ್ನು ಕಳೆದುಕೊಳ್ಳುವ ಹಂತ ತಲುಪಿದ್ದಾರೆ. ಅವರನ್ನು ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ತೊಡಗಿಸಿ, ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸುವಲ್ಲಿ ಪಾಲಕರ ಕರ್ತವ್ಯ ಬಹಳ ಮಹತ್ವದ್ದು, ಇಂತಹ ಕಾಯಕದಲ್ಲಿ ತೊಡಗಿಕೊಂಡಿರುವ ನಾಗರತ್ನ ಹಡಗಲಿ ದಂಪತಿಗಳು ಅಭಿನಂದನಾರ್ಹರು ಎಂದರು.
ಸಾನ್ನಿಧ್ಯ ವಹಿಸಿದ್ದ ಮುರಘಾಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು. ತುಮಕೂರಿನ ವಿದ್ವಾನ್ ಸಾಗರ್ ಟಿ.ಎಸ್. ಸವಿತಾ ಅಮರಶಟ್ಟಿ ಮಾತನಾಡಿದರು. ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ಡಾ. ಶುಭದಾ ಇದ್ದರು. ಗೋಕಾಕ, ಬೈಲಹೊಂಗಲ, ರಾಮದುರ್ಗ ಹಾಗೂ ಧಾರವಾಡದ 130ಕ್ಕೂ ಹೆಚ್ಚಿನ ಕಲಾವಿದರು ಅಕ್ಕನ ಜೀವನದ ವಿಚಾರಧಾರೆಗಳನ್ನು ಒಳಗೊಂಡ 12 ವಚನಗಳಿಗೆ ಮಾಡಿದ ನೃತ್ಯರೂಪಕ ಮೂಡಿ ಬಂತು. ಕಲಾದೇಗುಲ ಶ್ರೀನಿವಾಸ ನಿರೂಪಿಸಿದರು. ಸುನೀಲ ಕುಲಕರ್ಣಿ ಸ್ವಾಗತಿಸಿದರು, ಡಾ. ಸಮತಾ ವಂದಿಸಿದರು.